` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
state award image
girish kasaravalli

ಇನ್ನು ಮುಂದೆ ಗಿರೀಶ್ ಕಾಸರವಳ್ಳಿಯವರು ತಮ್ಮ ಚಿತ್ರವನ್ನು ಪ್ರಶಸ್ತಿಗೆ ಕಳಿಸಬಾರದು. ಯಾಕೆಂದರೆ ಅವರ ಚಿತ್ರಗಳು ಕಣದಲ್ಲಿದ್ದರೆ ಬೇರೆ ಯಾರಿಗೂ ಪ್ರಶಸ್ತಿ ಸಿಗುವುದಿಲ್ಲ. ಇನ್ನೆಷ್ಟು ದಿನಾಂತ ಅವರೊಬ್ಬರೇ ಪ್ರಶಸ್ತಿ ಪಡಕೊಳ್ಳುವುದು, ಬೇರೆಯವರಿಗೂ ಚಾನ್ಸ್ ಸಿಗಲಿ..’

ನೀವು ನಂಬಿದರೆ ನಂಬಿ, ಇಂಥಾದ್ದೊಂದು ದಿವ್ಯಚಿಂತನೆ,ನಾಲ್ಕು ವರ್ಷದ ಹಿಂದೆಕೆಲವು ಕನ್ನಡ ನಿರ್ದೇಶಕರಲ್ಲಿ ಹುಟ್ಟಿಕೊಂಡಿತ್ತು. ಸರ್ಕಾರದ ಮುಂದೆ ಇದನ್ನು ಮನವಿ ರೂಪದಲ್ಲಿ ಅರ್ಪಿಸುವ ಯೋಚನೆಯೂ ಇತ್ತು. ಪ್ರತಿ ವರ್ಷ ರಾಂಕ್ ಪಡೆದುಕೊಳ್ಳುವ ವಿದ್ಯಾರ್ಥಿಗೆ ನೀನು ಮುಂದಿನ ಸಾರಿ ಪರೀಕ್ಷೆಗೆ ಕುಳಿತುಕೊಳ್ಳಬೇಡ ಎಂದು ಹೇಳಿದ ಹಾಗಿತ್ತು ಈ ವಾದ. ಗಿರೀಶ್ ಅವರಿಗೆ ಪ್ರಶಸ್ತಿ ಬಂದರೆ ಇಡೀ ರಾಜ್ಯವೇ ಹೆಮ್ಮೆಪಡಬೇಕು, ಅದರೆ  ಇಲ್ಲೇನಾಗುತ್ತಿದೆ?

ಸಿನಿಮಾ ಪ್ರಶಸ್ತಿ ಅನ್ನುವುದು ತುಂಬಾ ಡೇಂಜರ್. ಅದು ನಿಮ್ಮನ್ನು ಮಾನಸಿಕವಾಗಿ ಭ್ರಷ್ಟರನ್ನಾಗಿ ಮಾಡುತ್ತದೆ. ಅಹಂಕಾರಿಗಳನ್ನಾಗಿ ಮಾಡುತ್ತದೆ, ಕೊನೆಗೆ ಹತಾಶೆಗೆ ದೂಡುತ್ತದೆ.

state award function at mangalore (pic km veeresh)

ಕ್ಷಮಿಸಿ, ಇದು ಯಾರೋ ಮಹಾನ್ ಚಿಂತಕರು ಹೇಳಿದ ಮಾತಲ್ಲ, ನನ್ನದೇ ಅನ್ವೇಷಣೆ. ಒಂದು ಸಾರಿ ಪ್ರಶಸ್ತಿಯ ರುಚಿ ಕಂಡವನು ಮತ್ತೊಮ್ಮೆ ಅದಕ್ಕಾಗಿ ಹಪಹಪಿಸದೇ ಇದ್ದರೆ ಕೇಳಿ. ನಿಧಾನಕ್ಕೆ ಇದು ರೇಸ್ ಅಥವಾ ಇಸ್ಪೀಟಾಟದಂತೆ ಚಟವಾಗಿ ಬಿಡುತ್ತದೆ. ಅದಕ್ಕೆ ಕಾರಣಗಳು ಇಲ್ಲದೇ ಇಲ್ಲ. ಪ್ರಶಸ್ತಿ ಅನ್ನುವುದು ನೀವು ಬುದ್ದಿವಂತರು ಅಥವಾ ಪ್ರತಿಭಾವಂತರು  ಅನ್ನುವುದನ್ನು ಸಾರ್ವಜನಿಕವಾಗಿ ಕೂಗಿ ಹೇಳುವ ಒಂದು ವಿಧಾನ. ಹಾಗಂದಾಕ್ಷಣ ಪ್ರಶಸ್ತಿವಂಚಿತರು ನಿಮ್ಮಿಂದ ಕಡಿಮೆ ಬುದ್ದಿವಂತರು ಅಂತಾನೇ ಲೆಕ್ಕ ಅಲ್ವೇ?  ಅಲ್ಲಿಗೆ ನಿಮ್ಮ ಅಹಂ ಒಂದು ಪಟ್ಟು ಮೇಲೆ ಜಿಗಿಯುತ್ತದೆ. ನೀವು ಬೇರೆಯವರಿಗಿಂತ ಭಿನ್ನ ಅನ್ನುವ ಕಲ್ಪನೆಯೇ ತುಂಬಾ ರೋಮ್ಯಾಂಟಿಕ್.  ಜೊತೆಗೆ  ಪ್ರಶಸ್ತಿ ವಿಜೇತ ನಿರ್ದೇಶಕ ಅನ್ನುವ ಪ್ರಭಾವಳಿ ನಿಮ್ಮಲ್ಲೊಂದು ಅಸಹಜ ಮೇಲರಿಮೆಯನ್ನು ಹುಟ್ಟುಹಾಕುತ್ತದೆ. ಮುಂದಿನ ವರ್ಷ ನೀವು ಇನ್ನೊಂದು ಸಿನಿಮಾ ಮಾಡೇ ಮಾಡುತ್ತೀರಿ

ಪ್ರಶಸ್ತಿ ಅನ್ನುವುದು ಒಂದು ಲಾಭದಾಯಕ ಉದ್ಯಮವೂ ಕೂಡಾ. ಯಾಕೆಂದರೆ ಪ್ರಶಸ್ತಿ ಬಂದರೆ ಸಬ್ಸಿಡಿ ಸಿಗುವುದು ಗ್ಯಾರಂಟಿ. ದೂರದರ್ಶನದಲ್ಲಿ ಅದು ಪ್ರಸಾರವಾಗುವುದರಿಂದ ಇನ್ನಷ್ಟು ಲಕ್ಷಗಳು ಹರಿದುಬರುತ್ತವೆ. ಪ್ರಶಸ್ತಿ ಚಿತ್ರಗಳ ಫಾರ್ಮುಲಾ ಏನು ಅನ್ನುವುದು ನಿಮಗೆ ಅರ್ಥವಾಗುತ್ತದೆ. ನೀವು ನಿಧಾನಕ್ಕೆ ಭ್ರಷ್ಟರಾಗುತ್ತಾ ಹೋಗುತ್ತೀರಿ. ನಿಮ್ಮದೇ ಒಂದು ಗುಂಪು ಕಟ್ಟಿಕೊಳ್ಳುತ್ತೀರಿ, ಲಾಬಿ ಮಾಡುವುದಕ್ಕೆ ಬೇಕಾದ ಕಸರತ್ತುಗಳನ್ನು ಕಲಿಯುವುದಕ್ಕೆ ಶುರು ಮಾಡುತ್ತೀರಿ. ಕೊನೆಗೆ ನಿಮ್ಮದಲ್ಲದ ವ್ಯಕ್ತಿತ್ವವೊಂದು ಅದರಷ್ಟಕ್ಕೇ ನಿಮ್ಮೊಳಗೆ ಅವಾಹನೆಯಾಗುತ್ತದೆ.

state award - bhargava dance

ಇಷ್ಟೆಲ್ಲಾ ಮಾಡಿಯೂ ಪ್ರಶಸ್ತಿ ಸಿಗದೇ ಇದ್ದಾಗ ಏನಾಗುತ್ತದೆ ಹೇಳಿ?ನಿಮ್ಮ ಚಿತ್ರ ಆ ಮಟ್ಟಕ್ಕೆ ಇರಲಿಲ್ಲ ಅಂತ ನಿಮಗೆ ಅನಿಸುವುದೇ ಇಲ್ಲ, ಯಾಕೆಂದರೆ ನಿಮ್ಮ ರೆಕಾರ್ಡ್ ಹೇಳುವ ಪ್ರಕಾರ ನಿಮಗಿಂತ ಬುದ್ದಿವಂತರು ಯಾರೂ ಇಲ್ಲ. ಪ್ರಶಸ್ತಿ ಪಡೆಯುವುದು ನನ್ನ ಹಕ್ಕು ಅಂತ ನಿಮಗೇ ಮನವರಿಕೆಯಾಗಿದ್ದಾಗಿದೆ. ಹಾಗಾಗಿ ನೀವೊಂದು ತೀರ್ಮಾನಕ್ಕೆ ಬರುತ್ತೀರಿ. ಈ ಬಾರಿಯ ಪ್ರಶಸ್ತಿ ಸಮಿತಿಯ ಆಯ್ಕೆ ವಿಧಾನವೇ ಸರಿಯಿಲ್ಲ. ಅನರ್ಹರಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡುತ್ತೀರಿ. ಅದನ್ನು ಒಂದಿಬ್ಬರು ಪ್ರಶ್ನಿಸಿದಾಗ ನೀವು ಹತಾಶರಾಗುತ್ತೀರಿ. ನಿಮಗೆ ಸಂಬಂಧವಿಲ್ಲದೇ ಇದ್ದರೂ ಪ್ರಶಸ್ತಿ ಗಳಿಸಿದ ಚಿತ್ರಗಳನ್ನು ಹಿಗ್ಗಾಮುಗ್ಗ ಜಾಡಿಸುತ್ತೀರಿ. ಅಲ್ಲಿ ಜಾತಿ ರಾಜಕೀಯ, ವರ್ಗ ರಾಜಕೀಯ, ಸ್ವಜನ ಪಕ್ಷಪಾತದಂಥ ಅನಿಷ್ಟಗಳು ನುಸುಳಿವೆ ಎಂದು ನಿಮ್ಮದೇ ಆದ ಸಂಶೋಧನೆಯನ್ನು ಮಂಡಿಸುತ್ತೀರಿ.

ಪ್ರಶಸ್ತಿ ಅನ್ನುವುದು ನಿಮಗೆ ಮಿತ್ರರಿಗಿಂತ ಹೆಚ್ಚು ಶತ್ರುಗಳನ್ನು ತಂದುಕೊಡುತ್ತದೆ. ಪ್ರಶಸ್ತಿ ವಂಚಿತರ ಒಂದು ದೊಡ್ಡ ಗುಂಪೇ ನಿಮ್ಮ ವಿರುದ್ಧ ಮಾತಾಡುವುದಕ್ಕೆ ಶುರು ಮಾಡುತ್ತದೆ. ಆಗ ನಿಮಗೆ ಸಿಟ್ಟು ಬರುತ್ತದೆ. ನೀವು ಕೂಡಾ ಥೇಟು ಅವರಂತೆಯೇ ವಿವೇಚನೆಯಿಲ್ಲದೆ ಮಾತಾಡುವುದಕ್ಕೆ ಶುರು ಮಾಡುತ್ತೀರಿ. ನಿಮಗೆ ಅರಿವಿಲ್ಲದೆಯೇ ನೀವೊಂದು ದ್ವೀಪವಾಗಿ ಬಿಡುತ್ತೀರಿ.

nagathihalli chandrashekar, bharathi vishnuvardhan

ಪ್ರಶಸ್ತಿಗೆ ಭಾಜನನಾದವನು ಮಾಧ್ಯಮಗಳ ಮುಂದೆ ಏನು ಹೇಳುತ್ತಾನೆ ಅನ್ನುವುದು ನಮಗೆಲ್ಲರಿಗೂ ಕಂಠಪಾಠವಾಗಿದೆ – ‘ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ’. ಅದೇ ರೀತಿ ಪ್ರಶಸ್ತಿ ವಂಚಿತನಾದವನ ಹೇಳಿಕೆ ಕೂಡಾ ಯಾವುದೋ ಕಾಲದಲ್ಲಿ ಯಾರೋ ಬರೆದದ್ದೇ –‘ನನಗೆ ಸರ್ಕಾರ ಕೊಡುವ ಪ್ರಶಸ್ತಿಗಿಂತ ಜನ ಕೊಡುವ ಪ್ರಶಸ್ತೀನೇ ಶ್ರೇಷ್ಠ’. ಇನ್ನೊಂದು ವರ್ಗವಿದೆ. ನಿಮಗೆ ಪ್ರಶಸ್ತಿಯ ನಿರೀಕ್ಷೆ ಇತ್ತಾ ಅನ್ನುವ ಪ್ರಶ್ನೆ ಬಂದೊಡನೆ ಅವರು ಹೇಳುತ್ತಾರೆ. ‘ಖಂಡಿತಾ ಇತ್ತು,. ಆದರೆ ಇನ್ನೆರಡು ಪ್ರಶಸ್ತಿಗಳು ಸಿಗಬಹುದು ಅಂತಾನೂ ಅಂದುಕೊಂಡಿದ್ದೆ’. ಮತ್ತೊಂದು ವರ್ಗಕ್ಕೆ ಸೇರಿದವರು ಅಸಾಮಾನ್ಯರು.  ನಮ್ಮ ಲೆವೆಲ್ಲಿಗೆ ಈ ಪ್ರಶಸ್ತಿ ಚಿಕ್ಕದಾಯಿತು, ಹಾಗಾಗಿ ಅದನ್ನು ತಿರಸ್ಕರಿಸುತ್ತಿದ್ದೇನೆ ಅಂತ ಹೇಳಿಕೆ ಕೊಡುತ್ತಾರೆ, ಆಮೇಲೆ ಅವರು ಅದನ್ನು ಮರೆತರೂ ಕೇಳುವುದಕ್ಕೆ ನಮಗೂ ನೆನಪಿರಬೇಕಲ್ವ!

2010-11ರ ಸಾಲಿನ ಪ್ರಶಸ್ತಿಯ ಮರು ಮೌಲ್ಯಮಾಪನದ ಫಲಿತಾಂಶವನ್ನು ನೋಡಿದಾಗ ನನಗೆ ಹೀಗೆಲ್ಲಾ  ಅನಿಸುವುದೆಲ್ಲಾ ಶುರುವಾಯಿತು. ನನಗೆ ಚಾಕ್ಲೇಟು ಸಿಗಲಿಲ್ಲ ಅಂತ ರಚ್ಚೆಹಿಡಿಯುವ  ಮಗುವಿನ ಥರ ಯಾರೋ ಒಬ್ಬರು ಕೂಗಾಡುವುದು, ಕೋರ್ಟ್ ಮೆಟ್ಟಲೇರುವುದು, ಹೊಸ ಸಮಿತಿ ರಚನೆಯಾಗುವುದು, ಮತ್ತೆ ಮುದದಿಂದ ಎಲ್ಲರೂ ಕುಳಿತು ಸಿನಿಮಾ ನೋಡಿ ಹೊಸ ಪ್ರಶಸ್ತಿ ಪಟ್ಟಿ ಪ್ರಕಟಿಸುವುದು...ಇವೆಲ್ಲವೂ ನಮ್ಮಲ್ಲಿ ಮಾತ್ರ ಸಾಧ್ಯ.

state award stage

ಎಲ್ಲಾ ಸನ್ಮಾನ, ಬಹುಮಾನಗಳ ಹಿಂದೆ ಒಂದು ಅಪಸ್ವರ ಇದ್ದೇ ಇರುತ್ತದೆ. ಚಿಕ್ಕ ಮನುಷ್ಯರ ಅಪಸ್ವರ ಗೊಣಗಾಣದಂತೆ ಕೇಳಿಸಿ ಅಲ್ಲೇ ಮುರುಟಿಹೋಗುತ್ತದೆ. ಪ್ರಸಿದ್ಧರ ಅಸಮಾಧಾನವು ಪತ್ರಿಕೆ, ಚಾನೆಲ್ಲು ಮತ್ತು ಅವರ ಹಿಂಬಾಲಕರ ಮೂಲಕ ಸಾರ್ವಜನಿಕವಾಗುತ್ತದೆ. ಒಂದು ಹಂತದಲ್ಲಿ ನಮ್ಮೆಲ್ಲರಿಗೂ ಅವರಿಗೆ ಅನ್ಯಾಯವಾಗಿರುವುದು ನಿಜವೇ ಇರಬಹುದು ಅಂತ ಅನಿಸುವುದಕ್ಕೆ ಶುರುವಾಗುತ್ತದೆ. ಪದೇಪದೇ ನೋಡುವ ಸೋಪಿನ ಜಾಹಿರಾತು ನೋಡಿ ಮರುಳಾಗುವ ಹಾಗೆ. ಪ್ರಾಕ್ಟಿಕಲ್ ಆಗಿ ಮಾತಾಡುವುದಾದರೆ, ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಮೌಲ್ಯ ಜಾಸ್ತಿಯಾದದ್ದು ಟೀವಿ ಹಕ್ಕು ಮತ್ತು ಸಬ್ಸಿಡಿ ಸಿಗುವ ಆಮಿಷದಿಂದಾಗಿ. ಕಲಾತ್ಮಕ ನಿರ್ದೇಶಕರ ಸಂಖ್ಯೆ ದ್ವಿಗುಣಗೊಂಡಿದ್ದೂ ಅದೇ ಕಾರಣಕ್ಕೆ. 

ಸರ್ಕಾರಿ ಪ್ರಾಯೋಜಿತ ಸಿನಿಮಾ ಪ್ರಶಸ್ತಿಗಳಿಗೆ ಈಗ 48 ವರ್ಷ ತುಂಬಿದ್ದರೂ, ಅವುಗಳು ಸಿಕ್ಕಾಪಟ್ಟೆ ವಿವಾದಕ್ಕೆ ಗ್ರಾಸವಾಗುತ್ತಿರುವುದು ಕಳೆದ ಹನ್ನೆರಡು ವರ್ಷಗಳಲ್ಲಿ. ಒಂದೆರಡು ಉದಾಹರಣೆಗಳು ಹೀಗಿವೆಃ

ಮತದಾನ ಚಿತ್ರವನ್ನು ಕಡೆಗಣಿಸಲಾಗಿದೆ ಅಂತ ಟೀಎನ್.ಸೀತಾರಾಮ್ ಅವರು ಎಂಎಸ್, ಸತ್ಯು ಅವರನ್ನು ಹಿಟ್ಲರ್ ಎಂದು ಜರೆದಿದ್ದರು, ಮಾತಾಡ್ ಮಾತಾಡು ಮಲ್ಲಿಗೆ ಚಿತ್ರಕ್ಕೆ ಮೂರನೇ ಬಹುಮಾನ ಕೊಟ್ಟಿದ್ದಕ್ಕೆ ನನಗೆ ಆ ಪ್ರಶಸ್ತಿಯೇ ಬೇಡ ಅಂದಿದ್ದರು ನಾಗತಿಹಳ್ಳಿ ಚಂದ್ರಶೇಖರ್, ಆ ದಿನಗಳು ಚಿತ್ರಕ್ಕೆ ಪ್ರಶಸ್ತಿ ಬಾರದೇ ಇದ್ದಾಗ ಗಿರೀಶ್ ಕಾಸರವಳ್ಳಿ ಅವರೊಬ್ಬರೇ ಬುದ್ದಿವಂತರಾ ಎಂದು ಪ್ರಶ್ನಿಸಿದರು ಅಗ್ನಿ ಶ್ರೀಧರ್.

basanth kumar patil receiving state award

ನಾವು ತಲೆಯೆತ್ತಿ ನೋಡುವ ಜನರೇ ತಮ್ಮ ಸಂಯಮ ಕಳಕೊಂಡು ಮಾತಾಡಿದಾಗ ಮುಜುಗರ ಪಟ್ಟುಕೊಳ್ಳಬೇಕಾ ಅಥವಾ ನಮ್ಮ ಮಟ್ಟಕ್ಕೆ ಅವರೂ ಇಳಿದರು ಅಂತ ಸಂತೋಷ ಪಡಬೇಕಾ?ಇವೆಲ್ಲದಕ್ಕೂ ಕಾರಣ ಈ ಪ್ರಶಸ್ತಿ ಎಂಬ ಕೀರ್ತಿ ಶನಿ. ನಮ್ಮ ಆಯ್ಕೆ ಸಮಿತಿಯವರೂ ಪದೇಪದೇ ತಮ್ಮ ಹಾಸ್ಯಪ್ರಜ್ಞೆಯನ್ನು ಮೆರೆಯುತ್ತಾರೆ. ಮುನಿರತ್ನ ಅವರ ಕಣ್ಣಿಗೆ ಶ್ರೇಷ್ಠ ಕಥೆಗಾರನಾಗಿಯೂ, ಪರಭಾಷಾ ಗಾಯಕ ಟಿಪ್ಪು ಅತ್ಯುತ್ತಮ ಗಾಯಕನಾಗಿಯೂ ಗೋಚರಿಸುತ್ತಾರೆ. ಕೆಎಸ್ಆರ್. ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಪ್ರಶಸ್ತಿ ಯಾರೋ ಟೀಕಿಸಿದರು ಅನ್ನೋ ಕಾರಣಕ್ಕೆ ಗಿರೀಶ್ ಕಾರ್ನಾಡರಿಗೆ ವರ್ಗವಾಗುತ್ತದೆ.

ಈಗ ಹೊಸ ಪಟ್ಟಿ ನಮ್ಮ ಮುಂದಿದೆ.  ಅತೃಪ್ತರು ಈ ಬಾರಿಯೂ  ಪ್ರಶ್ನೆಗಳನ್ನು ಕೇಳಬಹುದುಃ  ರಮ್ಯಾಗೆ ಹೇಗೆ ಪ್ರಶಸ್ತಿ ಬಂತು?ರಾಜ್ಯದಲ್ಲಿ  ಕಾಂಗ್ರೆಸ್ ಸರ್ಕಾರವಿದೆ ಅನ್ನುವ ಕಾರಣಕ್ಕಾ ಅಥವಾ ಇನ್ನು ಮುಂದೆ ಆಕೆ ನಟಿಸುವುದಿಲ್ಲ ಅನ್ನುವ ಕಾರಣಕ್ಕಾ? ಬ್ಯಾರಿ ಚಿತ್ರಕ್ಕೆ ಪ್ರಶಸ್ತಿ ಕೊಡುವುದರ ಮೂಲಕ ಕಾಂಗ್ರೆಸ್ ಸರ್ಕಾರದ ಅಲ್ಪಸಂಖ್ಯಾತರನ್ನು ಒಲೈಸುವ ಅಜೆಂಡಾ ಜಾಹೀರಾಯಿತಾ?

prithvi, jackie

‘ಪೃಥ್ವಿ’ಚಿತ್ರದ ಅಭಿನಯಕ್ಕೆ ಪುನೀತ್ ಅವರಿಗೆ ನೀಡಲಾದ ಶ್ರೇಷ್ಠ ನಟ ಪ್ರಶಸ್ತಿಯನ್ನು ‘ಜಾಕಿ’ಚಿತ್ರಕ್ಕೆ ವರ್ಗಾಯಿಸಿದ್ದು ಯಾಕೆ?  ನ್ಯಾಯಾಲಯ ಹೇಳಿದ್ದು ಸಮಿತಿಯನ್ನು ಬದಲಾಯಿಸಿ ಅಂತ. ಆದರೆ ಹೊಸ ಸಮಿತಿ ಪ್ರಶಸ್ತಿ ಪಟ್ಟಿಯನ್ನು ಬದಲಾಯಿಸಿದ್ದೇಕೆ?ಯಾವುದೋ ಒಂದು ಚಿತ್ರದ ವಿಷಯದಲ್ಲಿ ನಿಯಮಬಾಹಿರವಾಗಿ ನಡೆದುಕೊಳ್ಳಲಾಗಿದೆ ಅಂದಮಾತ್ರಕ್ಕೆ ಮಿಕ್ಕವರೆಲ್ಲರಿಗೂ ಯಾಕೆ ಅನ್ಯಾಯ ಮಾಡುತ್ತೀರಿ?ಪ್ರಶಸ್ತಿ ಪಡೆದುಕೊಂಡವರ ಸಂತಸಕ್ಕಿಂತ ವಿನಾಕಾರಣ ಅದನ್ನು ಕಳೆದುಕೊಂಡವರ ದುಃಖದ ತೀವ್ರತೆ ಜಾಸ್ತಿ ಅಲ್ವೇ?ಬರೀ ದುಖ ಅಷ್ಟೇ ಅಲ್ಲ, ಅವರ ವಲಯದಲ್ಲಿ ಅದು ಅವಮಾನ ಕೂಡಾ.

vishnuvardhan, ramesh aravind during state award function at ramanagara

ಪ್ರಶಸ್ತಿ ಪಡೆದುಕೊಂಡವರೂ ಮತ್ತು ಸಿಗದೇ ಇದ್ದವರೂ ಒಂದು ಮಾತು ನೆನಪಲ್ಲಿಟ್ಟುಕೊಳ್ಳಬೇಕು. ಈ ಪ್ರಶಸ್ತಿಯನ್ನು ನಿರ್ಧರಿಸುವವರು ಕೇವಲ ಹತ್ತು ಮಂದಿ. ಹಾಗಾಗಿ ಇಲ್ಲಿ ಸಮಿತಿ ಸದಸ್ಯರ ರುಚಿ, ಅಭಿರುಚಿ ಮತ್ತು ಮರ್ಜಿಗೆ ತಕ್ಕಂತೆ ಪ್ರಶಸ್ತಿ ನಿರ್ಧಾರವಾಗುತ್ತದೆ ಅಥವಾ ಕೆಲವೊಮ್ಮೆ‘ಹಂಚಿಕೆ’ಯಾಗುತ್ತದೆ. ನಾನು ಮೂರು ಬಾರಿ ಸಮಿತಿ ಸದಸ್ಯನಾಗಿದ್ದರಿಂದ ನನ್ನ ಅನುಭವಕ್ಕೆ ದಕ್ಕಿದ ಸಂಗತಿಗಳು ಹೀಗಿವೆ,

  • ಇಂಥವರು ಹಲವಾರು ವರ್ಷಗಳಿಂದ ಉದ್ಯಮದಲ್ಲಿದ್ದಾರೆ. ಒಂದೇ ಒಂದು ಪ್ರಶಸ್ತಿ ಬಂದಿಲ್ಲ. ಹಾಗಾಗಿ ಈ ಬಾರಿಯಾದರೂ ಅವರಿಗೆ ಕೊಟ್ಟುಬಿಡೋಣ. ಅಥವಾ ಇಂಥವರು ತುಂಬಾ ಕಷ್ಟದಲ್ಲಿದ್ದಾರೆ. ಪ್ರಶಸ್ತಿ ಕೊಟ್ಟರೆ ಅವರಿಗೆ ಉಪಯೋಗವಾಗುತ್ತದೆ. ಅನುಕಂಪದ ಆಧಾರದ ಮೇಲೆ ಪ್ರಶಸ್ತಿ ಕೊಡುವ ಈಒತ್ತಾಯ ಸಾಮಾನ್ಯವಾಗಿ ಬರುವುದು ಚಿತ್ರರಂಗವನ್ನು ಪ್ರತಿನಿಧಿಸುವ ಸದಸ್ಯರಿಂದ.
  • ಇವರಿಗೆ ಕಳೆದ ಸಲ ಪ್ರಶಸ್ತಿ ಕೊಟ್ಟಿದ್ದೇವೆ. ಮತ್ತೆ ಮತ್ತೆ ಅವರಿಗೇ ಕೊಡುವುದು ಯಾವ ನ್ಯಾಯ ಹೇಳಿ. ಬೇರೆಯವರಿಗೆ ಕೊಡೋಣಂತೆ.
  • ಒಂದೇ ಚಿತ್ರಕ್ಕೆ ನಾಲ್ಕೈದು ಪ್ರಶಸ್ತಿ ಯಾಕೆ ಕೊಡಬೇಕು. ಬೇರೆ ಚಿತ್ರಗಳಿಗೂ ಕೊಡೋಣ. ಅವರಿಗೂ ಸಂತೋಷವಾಗಲಿ.
  • ನೀವು ಸೂಚಿಸಿದ ಇಬ್ಬರಿಗೆ ಪ್ರಶಸ್ತಿ ಕೊಡುವುದಕ್ಕೆ ನಾನು ಒಪ್ಪಿಕೊಂಡಿದ್ದೇನೆ. ಈಗ ನನ್ನ ಸರದಿ. ನೀವು ಒಪ್ಪಿಕೊಳ್ಳಬೇಕು.
  • ದೊಡ್ಡ ಕಂಪನಿಯ ಚಿತ್ರ, ಅದು ಬೇರೆ ಹಿಟ್ ಆಗಿದೆ. ಅವರಿಗೆ ಪ್ರಶಸ್ತಿ ಕೊಟ್ಟಿಲ್ಲಾಂದ್ರೆ ನಾಳೆ ಗಲಾಟೆಯಾಗುತ್ತೆ. ಯಾಕೆ ಸುಮ್ಮನೇ ಮೈಮೇಲೆ ಹಾಕಿಕೊಳ್ಳೋದು. ಕೊಟ್ ಬಿಡೋಣ.
  • ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿದ ಚಿತ್ರಗಳಿಗೇ ನಾವೂ ಪ್ರಶಸ್ತಿ ಕೊಡುವುದಾದರೆ ನಾವ್ಯಾಕೆ ಇಲ್ಲಿ ಕುಳಿತುಕೊಳ್ಳಬೇಕು?ಬೇರೆ ಚಿತ್ರಗಳಿಗೆ ಕೊಡೋಣಂತೆ.

ಸಮಿತಿಯಲ್ಲಿ ತಜ್ಞರು ಇರಬೇಕು ಅನ್ನುವ ಕಾರಣಕ್ಕೆ ಒಬ್ಬ ನಿರ್ದೇಶಕ, ಒಬ್ಬ ಛಾಯಾಗ್ರಾಹಕ ಹೀಗೆ ನಾನಾ ವಿಭಾಗದ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದುಂಟು. ಅದರಿಂದ ಅನನುಕೂಲವಾಗುವುದೇ ಜಾಸ್ತಿ. ಉದಾಹರಣೆಗೆ ಛಾಯಾಗ್ರಾಹಕ ಬೇರೆ ಎಲ್ಲಾ ವಿಭಾಗದ ಪ್ರಶಸ್ತಿಗಳ ಆಯ್ಕೆ ಸಂದರ್ಭದಲ್ಲಿ ತುಟಿಗೆ ಬೀಗ ಹಾಕಿಕೊಂಡು ಕುಳಿತಿರುತ್ತಾನೆ. ಛಾಯಾಗ್ರಹಣಕ್ಕೆ ಪ್ರಶಸ್ತಿ ನೀಡಬೇಕು ಅನ್ನುವಾಗ ತನ್ನ ವಿಟೋ ಚಲಾಯಿಸುತ್ತಾನೆ. ಈ ಬಗ್ಗೆ ಬೇರೆ ಯಾರಿಗೂ ಮಾತಾಡುವ ಹಕ್ಕೇ ಇಲ್ಲ!

ಸರ್ಕಾರದ ವತಿಯಿಂದ ಕೆಲವರು ಸಮಿತಿ ಸದಸ್ಯರಾಗಿರುತ್ತಾರೆ. ಸಚಿವರ ಊರು ಅಥವಾ ಜಾತಿಗೆ ಸೇರಿದ ವ್ಯಕ್ತಿ ವಿನಾಕಾರಣ  ಸಮಿತಿಯೊಳಗೆ ಪ್ರತ್ಯಕ್ಷರಾಗುತ್ತಾನೆ. ಅವನ ಪಾಲಿಗೆ ಅದುವೇ ಪ್ರಶಸ್ತಿ.

state award function in 1972

ಅಂದಹಾಗೆ ರಾಜ್ಯಸರ್ಕಾರ, ಚಲನಚಿತ್ರ ಪ್ರಶಸ್ತಿಗಳನ್ನು ನೀಡುವ ಸತ್ಸಂಪ್ರದಾಯ ಆರಂಭಿಸಿದ್ದು, ಕನ್ನಡ ಚಿತ್ರಗಳು ಇಲ್ಲೇ ನೆಲೆಯಾಗಬೇಕು ಅನ್ನುವ ಕಾರಣಕ್ಕೆ. ಕನ್ನಡದ ನೇಟಿವಿಟಿ ಹೊಂದಿರುವ ಪ್ರಾಯೋಗಿಕ ಚಿತ್ರಗಳಿಗೆ ಈ ಪ್ರಶಸ್ತಿಗಳನ್ನು ನೀಡಬೇಕು ಅನ್ನುವ ನಿಯಮವೂ ಇದೆ. ಈಗ ಐಟಂ ಸಾಂಗ್ ಇರುವ ಚಿತ್ರಕ್ಕೆ, ಕನ್ನಡ ಮಾತಾಡುವುದಕ್ಕೆ ಒದ್ದಾಡುವ ನಟನಿಗೆ, ನಂಗ್ಯಾಕೆ ಪ್ರಶಸ್ತಿ ಸಿಗಲಿಲ್ಲ ಎಂದು ಗರ್ಜಿಸುವವರಿಗೆ ಪ್ರಶಸ್ತಿಗಳು ಸಿಗುತ್ತಿವೆ. ತಪ್ಪಾಗುತ್ತಿರುವುದು ಸಿನಿಮಾಗಳ ಆಯ್ಕೆಯಲ್ಲಲ್ಲ, ಸಮಿತಿಯ ಆಯ್ಕೆಯಲ್ಲಿ. ಅಲ್ಲಿ ಪ್ರಜ್ಞಾವಂತರಿದ್ದರೆ ಅವರ ಆಯ್ಕೆಯಲ್ಲೂ ಪ್ರಜ್ಞಾವಂತಿಕೆಯಿರುತ್ತದೆ.

ಇಲ್ಲದಿದ್ದಲ್ಲಿ ಕೊಟ್ಟೋನು ಕೋಡಂಗಿ, ಇಸಕೊಂಡೋನು ಶಿವರುದ್ರಯ್ಯ ಅಂತ ಜನ ಆಡಿಕೊಳ್ಳುವ ಹಾಗಾಗುತ್ತದೆ.

Also See

Uma Column 6 - ಹಾಯ್ ಕನ್ನಡ ತಾಯ್!

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.