` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rajkumar vishnuvardhan image
rajkumar, vishnuvardhan

ಎಂಜಿ ರಸ್ತೆಗೆ ಶಾಪಿಂಗ್ ಮಾಡುವುದಕ್ಕೆ ಬಂದ ಹುಡುಗಿ ಇನ್ನೇನು ರಸ್ತೆ ದಾಟಬೇಕು ಅನ್ನುವಾಗ ನ್ಯೂಸ್ ಚಾನೆಲ್ಲಿನ ನಿರೂಪಕ ಆಕೆಯ ಮುಂದೆ ಮೈಕ್ ಹಿಡಿಯುತ್ತಾನೆ. ಅದು ಕನ್ನಡ ಕ್ವಿಜ್ ಸ್ಪರ್ಧೆ. ನಿರೂಪಕ ಕೇಳುವ ಪ್ರಶ್ನೆಗಳಿಗೆ ಆಕೆ ಅಚ್ಚಕನ್ನಡದಲ್ಲಿ ಉತ್ತರ ನೀಡಬೇಕು.. ಗೆದ್ದರೆ ಯಾವುದೋ ಆಗರಬತ್ತಿ ಕಂಪನಿಯಿಂದ ಗಿಫ್ಟ್ ಹ್ಯಾಂಪರ್ ಬಹುಮಾನ. ಅಪ್ಪಿತಪ್ಪಿ ಆಕೆಯ ಮಾತಲ್ಲಿ ಒಂದೇ ಒಂದು ಆಂಗ್ಲ ಪದ ನುಸುಳಿದರೆ ಆಕೆ ಸೋತ ಹಾಗೆ.  ಅವಳು ಸೋಲುತ್ತಾಳೆ, ಮತ್ತೊಬ್ಬಳೂ ಸೋಲುತ್ತಾಳೆ, ಯಾರೂ ಗೆಲ್ಲುವುದೇ ಇಲ್ಲ. ವೀಕ್ಷಕರು ಇದನ್ನೊಂದು  ಹಾಸ್ಯ ಕಾರ್ಯಕ್ರಮ ಅನ್ನುವಂತೆ ನಗುನಗುತ್ತಾ ನೋಡುತ್ತಾರೆ. ತಾಯಿ ಭುವನೇಶ್ವರಿ ಕಣ್ಣೀರು ಹಾಕುವುದಿಲ್ಲ, ಯಾಕೆಂದರೆ ಪ್ರತಿವರ್ಷವೂ ಈ ಸೋಲು ತನಗೆ ಕಟ್ಟಿಟ್ಟ ಬುತ್ತಿ ಅನ್ನುವುದು ಆಕೆಗೆ ಗೊತ್ತಿದೆ.

sa ra govindu

ಇದು ಕನ್ನಡ ರಾಜ್ಯೋತ್ಸವಕ್ಕೆ ನಮ್ಮ ಚಾನೆಲ್ಲುಗಳ ಕೊಡುಗೆ. ನಿಮಗೆ ಗಂಭೀರ ವಿಷಯ ಬೇಕು ಅಂದರೆ ಎಫ್ಎಂ ಚಾನೆಲ್ಲುಗಳ ಆರ್ ಜೆಗಳನ್ನು ಸ್ಟುಡಿಯೋಗೆ ಕರೆಸಿ, ಅವರ ಪಕ್ಕದಲ್ಲಿ ಕನ್ನಡ ಸಾಹಿತಿಗಳನ್ನು ಕೂರಿಸಿ, ‘ಕನ್ನಡ ಮಾತಾಡುವಾಗ ಇಂಗ್ಲಿಷ್ ಪದಗಳನ್ನು ಬಳಸುವುದು ಸರಿಯಾ?’ಅನ್ನುವ ಚರ್ಚೆ ಏರ್ಪಡಿಸುತ್ತೇವೆ. ಕೊನೆಗೂ ಅದೂ ತಮಾಷೆಯಾಗಿ ಪರ್ಯವಸಾನಗೊಳ್ಳುತ್ತದೆ. ಅದು ಹಾಗೆ ಆದರೇ ಚೆನ್ನ. ಯಾಕೆಂದರೆ ದೇಶಪ್ರೇಮ, ಭಾಷಾಪ್ರೇಮಗಳನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಯಾರೂ ನೋಡುವುದಿಲ್ಲ ಅನ್ನುವುದು ಚಾನೆಲ್ಲುಗಳ ದೃಢವಾದ ನಂಬಿಕೆ.  ಕನ್ನಡ ಸಿನಿಮಾಗಳಿಗೆ ಒಂದು ಫಾರ್ಮುಲಾ ಇರುವಂತೆ, ಕನ್ನಡಪರ ಕಾರ್ಯಕ್ರಮಗಳಿಗೂ ಒಂದು ಫಾರ್ಮುಲಾ ಇರುತ್ತದೆ. ಅದರ ಕೆಲವು ಸ್ಯಾಂಪಲ್ಲುಗಳು ಹೀಗಿರುತ್ತವೆ –

ಕನ್ನಡ ಸಂಸ್ಕೃತಿ ಸಚಿವರು ಗಡಿನಾಡಲ್ಲಿ ಕನ್ನಡದ ಅಭಿವೃದ್ದಿಗೋಸ್ಕರ ನಾಲ್ಕೋ ಅಥವಾ ಐದೋ ಅಂಶಗಳ ಸೂತ್ರವನ್ನು ಪ್ರಕಟಿಸುತ್ತಾರೆ, ಅದು ಜಾರಿಗೆ ಬರುವುದಿಲ್ಲ ಅನ್ನುವುದು ಅವರಿಗೂ ಗೊತ್ತು. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು  ಬೆಂಗಳೂರಿನ ಅಂಗಡಿಗಳ ಮುಂದಿರುವ ಇಂಗ್ಲಿಷ್ ನಾಮ ಫಲಕಗಳಿಗೆ ಮಸಿ ಬಳಿಯುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಹೊಸ ನಾಮಫಲಕ, ಅದೂ ಇಂಗ್ಲಿಷ್ ನಲ್ಲೇ  ಸ್ಥಾಪನೆಯಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು ಮತ್ತು ಕಾವಲು ಪಡೆ ಅಧ್ಯಕ್ಷರು ಸೇರಿಕೊಂಡು ಸರ್ಕಾರಿ ಕಚೇರಿಗಳ ಪತ್ರವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲೇ ನಡೆಯಬೇಕು ಅಂತ ಆಗ್ರಹಿಸುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದಲೂ ಆ ಅಗ್ರಹ ಮರುಪ್ರಸಾರ ಆಗುತ್ತಲೇ ಇದೆ. ನವೆಂಬರ್  ತಿಂಗಳು ಪೂರ್ತಿ ಎಲ್ಲಾ ಚಿತ್ರಮಂದಿರಗಳೂ ಕಡ್ಡಾಯವಾಗಿ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಬೇಕು ಅಂತ ಚಿತ್ರ ನಿರ್ಮಾಪಕರ ಸಂಘ ಫರ್ಮಾನು ಹೊರಡಿಸುತ್ತದೆ.ನಿಮ್ಮ ಹತ್ತಿರ  ಅಷ್ಟೊಂದು ಕನ್ನಡ ಚಿತ್ರಗಳೆಲ್ಲಿವೆ ಅಂತ ಪ್ರದರ್ಶಕರು ಗೇಲಿ ಮಾಡುತ್ತಾರೆ. ನವಂಬರ್ ತಿಂಗಳಲ್ಲಿ ಇವೆಲ್ಲಾ ಪ್ರಹಸನಗಳಿಗೆ ನೀವು ತಯಾರಾಗಿರಬೇಕು.

protest for kannada

ಮೂವತ್ತು ವರ್ಷಗಳ ಹಿಂದಿನ ‘ವಿಜಯಚಿತ್ರ’ಸಿನಿಮಾ ಮಾಸಿಕವನ್ನು ತಿರುವಿ ಹಾಕುತ್ತಿದ್ದಾಗ ಅಲ್ಲೊಂದು ಸುದ್ದಿ ಕಾಣಿಸಿತು. ‘ಪರಭಾಷಾ ಚಿತ್ರಗಳ ಹಾವಳಿಯ ವಿರುದ್ಧ ಕನ್ನಡ ನಿರ್ಮಾಪಕರ ಪ್ರತಿಭಟನೆ’ಅನ್ನುವುದು ಅದರ ಶೀರ್ಷಿಕೆ. ಈಗಲೂ ಆಗಾಗ ಅದೇ ಶೀರ್ಷಿಕೆಯನ್ನು ನೀವು ಪತ್ರಿಕೆಗಳಲ್ಲಿ ನೋಡಬಹುದು. ಹೋರಾಟ ನಿರಂತರವಾಗಿ ಸಾಗಿದೆ, ಹೇಳಿಕೆಗಳಲ್ಲಿ. ಅಂದಹಾಗೆ ಬೆಂಗಳೂರಲ್ಲಿ ಎಲ್ಲಾ ಪರಭಾಷಾ ನಾಯಕರಿಗೂ ಅಭಿಮಾನಿಗಳ ಸಂಘವಿದೆ. ಪರಭಾಷಾ ಚಿತ್ರವೊಂದು ತನ್ನ ನೆಲದಲ್ಲಿ ಬಿಡುಗಡೆಯಾಗಿ ಏಳು ವಾರಗಳ ನಂತರವೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು ಅನ್ನುವ ಫಿಲಂಚೇಂಬರ್ ನಿಯಮದ ಗತಿ ಏನಾಯಿತು ಅನ್ನುವುದು ಎಲ್ಲರಿಗೂ ಗೊತ್ತಿದೆ. ಭುವನೇಶ್ವರಿಗಾದ ಗಾಯದ ಮೇಲೆ ಉಪ್ಪು ಸವರಿದಂತೆ ರೀಮೇಕು ಚಿತ್ರಗಳಿಗೂ ತೆರಿಗೆ ವಿನಾಯಿತಿ ನೀಡುವ ಔದಾರ್ಯವನ್ನು ಸರ್ಕಾರ ತೋರಿದೆ.  ಜಯಮಾಲಾ ಫಿಲಂಛೇಂಬರ್ ಅಧ್ಯಕ್ಷೆಯಾಗಿದ್ದಾಗ ಕನ್ನಡ ಚಿತ್ರಗಳಿಗೆ ಇಂಗ್ಲಿಷ್ ಶೀರ್ಷಿಕೆಗಳನ್ನು ಇಡಬಾರದು ಅನ್ನುವ ನಿಯಮ ರೂಪಿಸಿದ್ದರು. ಅದನ್ನು ನಮ್ಮ ನಿರ್ಮಾಪಕರು ಆರೇ ತಿಂಗಳಲ್ಲಿ ಯಶಸ್ವಿಯಾಗಿ ಮುರಿದರು. ಇಂಗ್ಲಿಷ್ ಟೈಟಲ್ಲುಗಳಲ್ಲಿ ಸಿಗುವ ಪಂಚ್ ಕನ್ನಡ ಶೀರ್ಷಿಕೆಗಳಲ್ಲಿ ಸಿಗುವುದಿಲ್ಲ ಅನ್ನುವುದು ಅವರು ನೀಡಿದ ಕಾರಣ. ಈಗಂತೂ ರಾಜ್ಯೋತ್ಸವ ಪ್ರಯುಕ್ತ ಗೋಡೆಗೋಡೆಗಳ ಮೇಲೆ ಸೆಕ್ಸ್ ಚಿತ್ರಗಳ ಪೋಸ್ಟರುಗಳು ರಾರಾಜಿಸುತ್ತಿವೆ.

ನವೆಂಬರ್ ತಿಂಗಳು ಬಂದಾಗಲೆಲ್ಲಾ ಮರುಪ್ರಸಾರವಾಗುವ ಕೆಲವು ಮಾತುಗಳು, ದೃಶ್ಯಗಳು ಈಗ ನೆನಪಾಗುತ್ತಿವೆ. ‘ನವಂಬರ್ ನಲ್ಲಿ ಮಾತ್ರ ಯಾಕೆ ಕನ್ನಡದ ಬಗ್ಗೆ ಪ್ರೀತಿ ಉಕ್ಕಿ ಹರಿಯಬೇಕು, ವರ್ಷ ಪೂರ್ತಿ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅಂತ ಹಾಡಬಹುದಲ್ವಾ’ಎಂದು ಉಗ್ರ ಅಭಿಮಾನಿಯೊಬ್ಬ ಓದುಗರ ಕಾಲಂನಲ್ಲಿ ಬರೆಯುವುದಕ್ಕಿದೆ.  ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದರಿಂದ ಆದ ಲಾಭವಾದರೂ ಏನುಎಂದು ಸಾಹಿತಿಯೊಬ್ಬರು ಪ್ರಶ್ನಿಸುವುದಕ್ಕಿದೆ.   ರಾಜ್ಯೋತ್ಸವ ಪ್ರಶಸ್ತಿ ಯಾರಿಗೆ ಕೊಡುವುದು ಅಂತ ಸರ್ಕಾರದ ಅಂತರಂಗದಲ್ಲಿ ಚರ್ಚೆ ಆಗಲೇ ಶುರುವಾಗಿದೆ. ಬಂಗಾರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 175 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ದಾಖಲೆ ಮಾಡಿದಾಗ, ಲಂಕೇಶ್ ಪತ್ರಿಕೆಯ ಮುಖಪುಟದಲ್ಲಿ ‘ಯೋಗ್ಯರಿಗೆ ಮುಂದಿನ ಬಾರಿ’ಅಂತ ಬಂಗಾರಪ್ಪನವರ ಹೇಳಿಕೆಯನ್ನೇ ಶೀರ್ಷಿಕೆಯಾಗಿಸಿ ಗೇಲಿ ಮಾಡಿದ್ದು ನೆನಪಾಗುತ್ತಿದೆ.

kannadave satya image

ಕನ್ನಡ ಹಬ್ಬ ಆಚರಣೆ ಬಗ್ಗೆ ನನ್ನ ಮನಸ್ಸಲ್ಲಿ ಉಳಿದ ಹಳೇ ಚಿತ್ರಗಳು ಇಂದಿಗೂ ಮುದ ನೀಡುತ್ತಿವೆ. ಅದರಲ್ಲೊಂದು  ಸೌಂಡ್ ಆಫ್ ಮ್ಯೂಸಿಕ್ ಅರ್ಕೆಸ್ಟ್ರಾದ ಹಾಡುಗಳು, ಆಗ ಗುರುರಾಜ್, ಮಂಜುಳಾ ಗುರುರಾಜ್, ಮದನ್ ಮಲ್ಲು ಮೊದಲಾದವರು ಚೆನ್ನಾಗಿ ಹಾಡುತ್ತಿದ್ದರು. ಈಗ ಹಾಸ್ಯೋತ್ಸವಗಳು ಆ ಜಾಗವನ್ನು ಆಕ್ರಮಿಸಿವೆ. ಅದಕ್ಕಿಂತಲೂ ಸ್ಥಿರವಾಗಿ ಉಳಿದ ಚಿತ್ರವೆಂದರೆ ಸಿ. ಅಶ್ವತ್ಥ್ ನಾಯಕತ್ವದಲ್ಲಿ ಅರಮನೆ ಮೈದಾನದಲ್ಲಿ ನಡೆದ ‘ಕನ್ನಡವೇ ಸತ್ಯ’ಕಾರ್ಯಕ್ರಮ. ಅಲ್ಲಿ ತನಕ ಆ ಜಾಗ ಪಾಶ್ಚಾತ್ಯ ಗಾಯಕರಿಗಷ್ಟೇ ಮೀಸಲಾಗಿತ್ತು. ಅವರು ವಿಕಾರವಾಗಿ ಅರಚುತ್ತಿದ್ದ ಕಾರ್ಯಕ್ರಮಗಳಿಗೆ ಸಾವಿರಾರು ಜನರು ಸೇರುತ್ತಿದ್ದರು. ಅದನ್ನೇ ಸವಾಲಾಗಿ ತೆಗೆದುಕೊಂಡ ಅಶ್ವತ್ಥ್ ಕನ್ನಡ ಸುಗಮಸಂಗೀತಕ್ಕೂ ಅಷ್ಟೇ ಜನರು ಸೇರುವ ಹಾಗೆ ಮಾಡುತ್ತೇನೆಂದು ಹೊರಟರು. ಗ್ಲೋಬಲ್ ಸಂಸ್ಥೆಯ ರಂಗಣ್ಣ, ಮಂಜಣ್ಣ ಅವರ ಬೆನ್ನಿಗೆ ನಿಂತರು.  ಪತ್ರಕರ್ತನಾಗಿದ್ದರಿಂದ ತಡವಾಗಿ ಹೋದರೂ ನಡೆಯುತ್ತದೆ ಅಂದುಕೊಂಡ ನಾನು ಸಂಜೆ ಆರು ಗಂಟೆಗೆ ಹೋದಾಗ ಅಲ್ಲಿ ಕಂಡ ದೃಶ್ಯ ನನ್ನನ್ನು ದಿಗ್ಬ್ರಾಂತನನ್ನಾಗಿಸಿತು. ಸೀಟು ಸಿಗುವುದಿರಲಿ, ಗೇಟು ದಾಟಿ ಮುಂದೆ ಹೋಗುವುದೇ ಕಷ್ಟ ಅನ್ನುವಂತಿತ್ತು ಜನಸಾಗರ. ಕನ್ನಡಿಗರ ತಾಕತ್ತೇನು ಅನ್ನುವುದನ್ನು ಅಶ್ವತ್ಥ್ ಆವತ್ತು ತೋರಿಸಿಕೊಟ್ಟರು.  ರಾಪ್ ಪಾಪ್ ಅಂತ ಕಿರುಚಾಡುವ ಗಾಯಕರೇನಾದರೂ ಆವತ್ತು ಅಲ್ಲಿದ್ದರೆ ಅಶ್ವತ್ಥ್ ಪಾದಕ್ಕೆ ನಮಸ್ಕಾರ ಮಾಡುತ್ತಿದ್ದರು. ಅಲ್ಲಿ ನಡೆದದ್ದು ಅಕ್ಷರಶಃ ಕನ್ನಡ ಜಾತ್ರೆ. ಇವತ್ತಿನ ಸಂದರ್ಭದಲ್ಲಿ ಕನ್ನಡಿಗರ ಮನಸ್ಸುಗಳನ್ನು ಅರಳಿಸುವುದಕ್ಕೆ, ನಾನು ಕನ್ನಡಿಗ ಅಂತ ಹೆಮ್ಮೆಯಲ್ಲಿ ಹೇಳಿಕೊಳ್ಳುವುದಕ್ಕೆ ಬೇಕಾಗಿರುವುದು ಅಂಥಾ ಜಾತ್ರೆಗಳು. ರಾಜ್ ಕುಮಾರ್ ಅಂಥಾ ಕಲಾವಿದ ಮತ್ತು ಅಶ್ವತ್ಥ್ ಅವರಂಥಾ ಗಾಯಕನಿಂದ ಅದು ಸಾಧ್ಯವಾಯಿತು. ಈಗ ಯಾರಿದ್ದಾರೆ?

umashri, ambareesh

ಅದ್ಯಾಕೋ ನನಗೆ ಮೊದಲಿಂದಲೂ ಉತ್ಸವ ಅನ್ನುವ ಪದ ಕೇಳಿದರೆ ಕಿರಿಕಿರಿ. ನೀವೇ ಗಮನಿಸಿ, ಹಬ್ಬ, ಜಾತ್ರೆ ಮತ್ತು ಉತ್ಸವಗಳ ನಡುವೆ ವ್ಯತ್ಯಾಸಗಳಿವೆ. ಅದು ಕೇವಲ ಆಚರಣೆಗಷ್ಟೇ ಸಂಬಂಧಪಟ್ಟಿದ್ದಲ್ಲ. ನಮ್ಮ ಮನಸ್ಸಿಗೆ ಸಂಬಂಧಪಟ್ಟಿದ್ದು ಕೂಡಾ. ಹಬ್ಬ ಅಂದಾಕ್ಷಣ ಸಂಭ್ರಮ, ಜಾತ್ರೆ ಅಂದಾಕ್ಷಣ ಭಕ್ತಿ ಮತ್ತು ಗೌರವ ಮೂಡಿದರೆ, ಉತ್ಸವ ಅಂದಾಕ್ಷಣ ಸರ್ಕಾರಿ ಪ್ರಾಯೋಜಿತ ಮೆರವಣಿಗೆಗಳು ಕಣ್ಣ ಮುಂದೆ ಬರುತ್ತವೆ. ಸರ್ಕಾರಿ ಕಾರ್ಯಕ್ರಮ ಅಂದರೆ ಶುಷ್ಕ, ನೀರಸ.  ದಸರಾ ಮತ್ತು ಕನ್ನಡ ರಾಜ್ಯೋತ್ಸವಗಳಿಗೆ ಆಗಿರುವುದು ಅದೇ ಗತಿ. ಅದು ಹೇಗಿರುತ್ತವೆ ಅನ್ನೋದಕ್ಕೆ ಒಂದು ಉದಾಹರಣೆ ಹೇಳುತ್ತೇನೆ. ಹೋಮ್ ವರ್ಕ್ ಮುಗಿಸಿದ  ಮಗ ಬಂದು ನಿಮ್ಮನ್ನು ಕೇಳುತ್ತಾನೆ. ‘ಪಪ್ಪಾ, ಗಿಣಿ ಅಂದರೆ ಪಾರಟ್  ಅಲ್ವಾ’. ನೀವು ವೆರಿಗುಡ್ ಅಂತ ಬೆನ್ನು ಚಪ್ಪರಿಸುತ್ತೀರಿ. ಕನ್ನಡದ ಮಕ್ಕಳಿಗೂ ನಮ್ಮ ಮಕ್ಕಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಪತ್ರಿಕೆಗಳು, ಚಾನೆಲ್ಲುಗಳು, ಸರ್ಕಾರಿ ಕಚೇರಿಗಳು, ಸಂಘಸಂಸ್ಥೆಗಳು ಎಲ್ಲರೂ ರಾಜ್ಯೋತ್ಸವವನ್ನು ಒಂದು ಅನಿವಾರ್ಯ ಕರ್ಮವೆಂಬಂತೆ ಆಚರಿಸುತ್ತಾರೆ. ಅಪ್ಪ ಅಮ್ಮ ಏನಂತಾರೋ ಅಂತ ಮಕ್ಕಳು ಹೋಮ್ ವರ್ಕ್ ಮಾಡುತ್ತಾರೆ. ಬೇರೆಯವರು ಏನಂಥಾರೋ ಅಂತ ಕನ್ನಡದ ಮಕ್ಕಳು ಕಾರ್ಯಕ್ರಮಗಳನ್ನು ಮಾಡುತ್ತಾರೆ. ಪತ್ರಿಕೆಗಳಲ್ಲಿ ಅರ್ಧಪುಟದ ಜಾಹಿರಾತು ಕೊಟ್ಟರೆ ಸರ್ಕಾರದ ಕೆಲಸ ಮುಗೀತು. ಹಾಡು, ಚರ್ಚೆ, ಸಿನಿಮಾ ಹಾಕಿದರೆ ಚಾನೆಲ್ಲುಗಳ ಜವಾಬ್ದಾರಿ ಮುಗೀತು. ಆಟೋಗಳ ಹಿಂದೆ ಕನ್ನಡಪರ ಸ್ಲೋಗನ್ನು, ಹೋರಾಟಗಾರರ ಬೆನ್ನಿಗೆ ಕನ್ನಡ ಟೀ ಶರ್ಟು, ಕಚೇರಿಗಳ ಮುಂದೆ ಕನ್ನಡ  ಬಾವುಟ...

rajyotsava

ನವೆಂಬರ್ ಅನ್ನುವುದು ಕನ್ನಡಿಗರನ್ನು ಗೇಲಿ ಮಾಡುವ ತಿಂಗಳು. ‘ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬನ್ನಿ, ತಾಯ್ನಾಡ ಜಯಭೇರಿ ನಾವಾದವೆನ್ನಿ’ಅನ್ನುವ ಹಾಡನ್ನು ಪೋಲಿ ಹಾಡನ್ನಾಗಿ ಪರಿವರ್ತಿಸುವ ಪರ್ವರ್ಟೆಡ್ ಜನರು ನಮ್ಮ ನಡುವಿದ್ದಾರೆ. ಹಚ್ಚೇವು ಕನ್ನಡದ ದೀಪ ಅಂತ ಕೊರಳೆತ್ತಿ ಹಾಡಬೇಕಾದ ಕನ್ನಡಿಗರ ಕೈಯಲ್ಲಿ ಬತ್ತಿಯಿದೆ, ಬಾಯಲ್ಲಿ ಎಣ್ಣೆಯಿದೆ. ಕನ್ನಡದ ದೀಪ ಪರದೇಸಿ ಗಾಳಿಯ ರಭಸಕ್ಕೆ ಹೊಯ್ದಾಡುತ್ತಿದೆ.

ಹಬ್ಬಗಳು, ಉತ್ಸವಗಳು ಸರದಿ ಪ್ರಕಾರ ಸಾಲು ಸಾಲಾಗಿ ಬಂದು ನಿಲುಗಡೆಯಾಗುವುದು ನವಂಬರ್ ತಿಂಗಳಲ್ಲಿ. ಮಕ್ಕಳಿಗೆ ಮತ್ತು ಸರ್ಕಾರಿ ನೌಕರರಿಗೆ ರಜಾ ಮುಗಿಯಿತು ಅನ್ನುವ ಬೇಸರ, ಚಿಂದಿ ಆಯುವ ಮಕ್ಕಳಿಗೆ ಸಿಡಿಯದೇ ಉಳಿದ ಪಟಾಕಿಯ ಚೂರುಗಳನ್ನು ಹೆಕ್ಕಿಕೊಳ್ಳುವ ಆತುರ, ದಸರಾ ರಜಾದಲ್ಲೂ ಕಲೆಕ್ಷನ್ ಆಗಲಿಲ್ಲ ಅಂತ ಕೊರಗುವ ನಿರ್ಮಾಪಕರು, ಮತ್ತೆ ಹಳೇ ಸಿನಿಮಾಗಳತ್ತ ಹೊರಳುವ ಟೀವಿ ಚಾನೆಲ್ಲುಗಳು, ಚಳಿ ಶುರುವಾದ ಮೇಲಾದರೂ ವ್ಯಾಪಾರ ಆಗಬಹುದು ಅಂತ ರೇಲ್ವೇ ಸ್ಟೇಷನ್ ಬಳಿ ಕಾಯುತ್ತಾ ಕುಳಿತ ಸ್ವೆಟರ್ ಮಾರುವ ನೇಪಾಳಿ ಮಹಿಳೆ, ಫ್ಲೈ ಓವರ್ ಕೆಳಗೆ ಅಗ್ಗಿಷ್ಟಿಕೆ ಹಾಕಿ ಚಳಿ ಕಾಯಿಸಿಕೊಳ್ಳುತ್ತಾ ಕುಳಿತಿರುವ ಭಿಕ್ಷುಕ...

ನನಗೆ ಹಬ್ಬಕ್ಕಿಂತ ಅದು ಮುಗಿದ ನಂತರ ಕಾಣುವ ಚಿತ್ರಗಳೇ ಹೆಚ್ಚು ಆಸಕ್ತಿ ಮೂಡಿಸುತ್ತವೆ. ಒಂದೊಳ್ಳೇ ನಿದ್ದೆ ಮಾಡಿ ಆಕಳಿಸುತ್ತಾ ಎದ್ದು ಕುಳಿತ ಮಕ್ಕಳ ಕಣ್ಣಲ್ಲಿರುವ ಗಲಿಬಿಲಿಯಂತೆ...

ಅವೆಲ್ಲವನ್ನೂ ನೆನೆಯುತ್ತಾ ನಾನು ಶ್ರದ್ಧೆಯಿಂದ ಮೊರೆಯಿಡುತ್ತೇನೆ ‘ಕನ್ನಡದ ಕುಲದೇವಿ ಕಾಪಾಡು ಬಾ ತಾಯೆ….’

Also See

Uma Column 5 - ನನ್ನ ಭಯ ಮತ್ತು ಅಭಯನ ಜಯ

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.