` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
abhay simha, paramesh gundkal, nandaraj shetty image
abhay simha, paramesh gundkal, nandaraj shetty

ನಾನು ನಂಬದೇ ಇರುವ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ!ಈ ಅಭಯಸಿಂಹ ಎಂಬ ಸಂಕೋಚವೇ ಮೂರ್ತಿವೆತ್ತಂತ ಹುಡುಗ ಇಷ್ಟೊಂದು ವೇಗವಾಗಿ ಬೆಳೆಯುತ್ತಾನೆ ಅಂತ ನಾನು ಕನಸಲ್ಲೂ ಅಂದುಕೊಂಡಿರಲಿಲ್ಲ. ಪತ್ರಕರ್ತನಾಗಿ ನನ್ನ ಸರ್ವೀಸಿನಲ್ಲಿ ಇಂಥಾ ಹತ್ತಾರು ಹುಡುಗರು ಅತ್ಯುತ್ಸಾಹದಲ್ಲಿ ಬಂದು ಕೊನೆಗೆ ಬರಿಗೈಯಲ್ಲಿ ವಾಪಸಾಗಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗಂತ ಅವರು ಯಾರೂ ದಡ್ಡರಾಗಿರಲಿಲ್ಲ, ಹಂಸಲೇಖಾ ಮಾತಲ್ಲೇ ಹೇಳುವುದಾದರೆ ಅವರೆಲ್ಲರಲ್ಲೂ ಒಂದು ಸ್ಪಾರ್ಕ್ ಇತ್ತು. ಆದರೆ ಚಿತ್ರರಂಗದ ಅಸಡ್ಡಾಳ ವ್ಯವಸ್ಥೆಗೆ ಒಗ್ಗಿಕೊಳ್ಳುವುದಕ್ಕೆ ಅವರಿಂದ ಸಾಧ್ಯವಾಗಲಿಲ್ಲ. ಆಂಗ್ಲಭಾಷೆಯಲ್ಲಿ ಹೇಳುವುದಾದರೆ It sucks. ಸೂಕ್ಷ್ಮ ಪ್ರವೃತ್ತಿಯ ಹುಡುಗರು ಇಲ್ಲಿ ಬಾಳಿಕೆ ಬರುವುದು ಕಷ್ಟ. ಗಾಂಧಿನಗರದ ಅಂಗಳದಲ್ಲಿ ದಿನನಿತ್ಯ ಅವಮಾನದ ಮುಂಗಾರುಮಳೆ ಸುರಿಯುತ್ತಲೇ ಇರುತ್ತದೆ. ಆ ರಭಸಕ್ಕೆ ಕೊಚ್ಚಿಹೋಗದೇ ಉಳಿದವನು ಒಂದೋ ಜಾಣನಾಗಿರಬೇಕು ಅಥವಾ ದಪ್ಪಚರ್ಮದ ಭಂಡನಾಗಿರಬೇಕು.

abhay simha

ವಿಶೇಷವೆಂದರೆ ಅಭಯ ಅವೆರಡೂ ಅಲ್ಲ. ಪ್ರತಿಭಾವಂತನನ್ನು ಜಾಣನೆಂದು ಕರೆಯುವುದು ತಪ್ಪಾಗುತ್ತದೆ, ಭಂಡನೆಂದು ಕರೆಯುವುದು ಘೋರ ಅಪರಾಧವಾಗುತ್ತದೆ. ಅಭಯ ಎಂಥಾ ಒಳ್ಳೆಯ ಹುಡುಗನೆಂದರೆ ಕನ್ನಡ ನಿಘಂಟಿನಲ್ಲಿರುವ ಎಲ್ಲಾ ಹೊಗಳಿಕೆಯ ಪದಗಳನ್ನು ನೀವು ಆತನ ಮೇಲೆ ಪ್ರಯೋಗಿಸಬಹುದು. ಮಂಗಳೂರು ಬನ್ಸಿನಷ್ಟು ಮೆತ್ತಗಿನ ಸದ್ಗುಣ ಸಂಪನ್ನ. ಅದು ತಯಾರಾಗಿದ್ದು ವಿನಯ, ವಿವೇಕ ಮತ್ತು ಬುದ್ದಿವಂತಿಕೆಯ ಹದವಾದ ಮಿಶ್ರಣದಿಂದ.  ಆ ಜೀನ್ಸೇ ಅಂಥಾದ್ದು. ಅಭಯನ ಅಜ್ಜಜಿ.ಟಿ. ನಾರಾಯಣರಾಯರದ್ದು ಭೌತವಿಜ್ಞಾನಲೋಕದಲ್ಲಿ ಬಹಳ ದೊಡ್ಡ ಹೆಸರು, ಅಪ್ಪ ಅಶೋಕವರ್ಧನ್ ಅವರು ಪುಸ್ತಕಪ್ರಪಂಚದಲ್ಲಿ ಅಷ್ಟೇ ದೊಡ್ಡ ಹೆಸರು. ಅಭಯನದ್ದು ಚಿತ್ರಪ್ರಪಂಚ, ಚಿತ್ರವಿಚಿತ್ರ ಪ್ರಪಂಚವೂ ಹೌದು. ಇಂಥಾ ಹುಡುಗನಿಗೆ ತಮ್ಮ ಮಗಳು ರಶ್ಮಿಯನ್ನು ಕೊಡುವ ಹೊತ್ತಿಗೆ ಭಾಸ್ಕರ ಉಪಾಧ್ಯಾಯರು ಒಂದು ಸೆಕೆಂಡು ಕೂಡಾ ಯೋಚನೆ ಮಾಡಿರಲಾರರು.

abhay simha, rashmi abhay simha

ಸಿನಿಮಾದಲ್ಲಿ ನಾಯಕನಾಗುವದಕ್ಕೆ ಮಿದುಳು ಇರಲೇಬೇಕು ಅನ್ನುವುದೇನೂ ಕಡ್ಡಾಯವಲ್ಲ. ಕಾಣುವುದಕ್ಕೆ ಚೆನ್ನಾಗಿದ್ದರೆ , ಜೊತೆಗೆ ಅದೃಷ್ಟವೂ ಚೆನ್ನಾಗಿದ್ದರೆ ಹೀರೋ ಆಗಬಹುದು. ಒಂದೆರಡು ಹಿಟ್ ಚಿತ್ರಗಳನ್ನು ಕೊಟ್ಟರೆ ಸ್ಟಾರ್ ಆಗಬಹುದು. ಆದರೆ ನಿರ್ದೇಶಕನಾಗುವುದು ಅಷ್ಟೊಂದು ಸುಲಭದ ಮಾತಲ್ಲ. ನಿಮಗೆ ರಂಗುರಂಗಾಗಿ ಕತೆ ಹೇಳುವುದಕ್ಕೆ ಗೊತ್ತಿರಬೇಕು, ತೆರೆಯ ಮೇಲಲ್ಲ, ನಿರ್ಮಾಪಕನ ಮುಂದೆ. ಆತನನ್ನು ಮೆಚ್ಚಿಸುವಂಥಾ ಇತರೇ ವಿದ್ಯೆಗಳು ಗೊತ್ತಿರಬೇಕು. ಉದಾಹರಣೆಗೆ  ಮುಖಸ್ತುತಿ ಮಾಡುವುದು ಮತ್ತು ಕಡಿಮೆ ಬಜೆಟ್ಟಿನಲ್ಲಿ ಚಿತ್ರ ಮಾಡಿ ಕೊಡ್ತೀನಿ ಅನ್ನುವ ಆಶ್ವಾಸನೆ ನೀಡುವುದು, ಇಲ್ಲಿ ನಿರ್ದೇಶಕ ಅನ್ನುವವನು ಮಾತಲ್ಲೇ ಸೇತುವೆ ಕಟ್ಟಿ, ಅದರ ಮೇಲೆ ರೈಲು ಓಡಿಸುವ ಎಂಜಿನಿಯರ್.  

ಅಭಯಸಿಂಹನಿಗೆ ಇವ್ಯಾವುದೂ ಗೊತ್ತಿಲ್ಲ ಅನ್ನುವುದು ಆತನನ್ನು ಮೊದಲಬಾರಿ ಕಂಡಾಗಲೇ ನನಗೆ ಗೊತ್ತಾಯಿತು. ಈ ಕಾರಣಕ್ಕೇ ನನಗೆ ಇಂಥಾ ಹುಡುಗರನ್ನು ಕಂಡಾಗ ಹೊಟ್ಟೆಯಲ್ಲೇನೋ ಸಂಕಟ. ಈ ಚಕ್ರವ್ಯೂಹದೊಳಗೆ ಸಿಲುಕಿ ಅವರ ಸೂಕ್ಷ್ಮ ಮನಸ್ಸು ನರಳುವುದನ್ನು ನನ್ನಿಂದ ಕಲ್ಪಿಸಿಕೊಳ್ಳುವುದಕ್ಕಾಗುವುದಿಲ್ಲ.  ಈಜು ಗೊತ್ತಿಲ್ಲದೇ ಇರುವ ಹುಡುಗ ನೀರಲ್ಲಿ ಮುಳುಗೇಳುತ್ತಿರುವುದನ್ನು ನೋಡಿಯೂ ಏನೂ ಮಾಡೋದಕ್ಕಾಗದೇ ಇರುವ ಅಸಹಾಯಕ ಸ್ಥಿತಿಯದು. ಒಳ್ಳೇ ಮನೆತನದಿಂದ ಬರುವ ಸಂಸ್ಕಾರವಂತ ಹುಡುಗರಿಗೆ ಗಾಂಧಿನಗರದೊಳಗೆ ಪ್ರವೇಶವಿಲ್ಲ ಅನ್ನುವ ಬೋರ್ಡ್ ಹಾಕಿದರೆ ಹೇಗೆ?ಸಿನಿಮಾಕ್ಕೊಂದು ಭಾಷೆಯಿದೆ, ಸಿನಿಮಾದವರಿಗೆ ಭಾಷೆಯಿಲ್ಲಅಂತ ಯಾರೋ ಅಂದರಲ್ವಾ?

ಸರಿಸುಮಾರು ಆರು ವರ್ಷದ ಹಿಂದೆ ಅಭಯನನ್ನು ನನಗೆ ಪರಿಚಯಿಸಿದವರು ಪತ್ರಕತ್ರ ಮಿತ್ರ ಪರಮೇಶ್ ಗುಂಡ್ಕಲ್. ಆಗ ಅವರು ಉದಯವಾಣಿಯಲ್ಲಿದ್ದರು, ಕೆಲಸ ಬಿಟ್ಟು ಸಿನಿಮಾ ನಿರ್ದೇಶನ ಮಾಡುವ ಸಂಧಿಕಾಲದಲ್ಲಿದ್ದರು. ಶುಭಂ ಎಂಬ ಚಿತ್ರ ನಿರ್ಮಿಸಿ ಕೈಸುಟ್ಟುಕೊಂಡಿದ್ದ  ಎನ್. ಆರ್, ಶೆಟ್ಟಿ ಅವರೇ ಈ ಚಿತ್ರದ ನಿರ್ಮಾಪಕರು. ಮೊದಲು ಒಪ್ಪಿಕೊಂಡಿದ್ದ ಉಪೇಂದ್ರ ಅದ್ಯಾಕೋ ಕೊನೆಗಳಿಗೆಯಲ್ಲಿ ಈ ಯೋಜನೆಯಿಂದ ಹಿಂದೆಸರಿದರು. ಗುಂಡ್ಕಲ್ ಝೀಟೀವಿ ಸೇರಿಕೊಂಡರು, ಸದ್ಯಕ್ಕೆ ಈಟೀವಿ ಮುಖ್ಯಸ್ಥರು. ಅಭಯನನ್ನು ಮೊದಲಸಲ ನೋಡಿದಾಗ ಆತ  ಕರಾವಳಿಯ ಬ್ರಾಹ್ಮಣರ ಮನೆಯ ಅಂಗಳದಿಂದ ಎದ್ದು ಬಸ್ಸುಹತ್ತಿ ನೇರವಾಗಿ ಬೆಂಗಳೂರಿಗೆ ಬಂದಿಳಿದ ಪಾಪದ ಮಾಣಿಯಂತೆ ನನ್ನ ಕಣ್ಣಿಗೆ ಕಂಡರು.  ನಾನು ಬೆಂಗಳೂರಿಗೆ ಬಂದು ಒದ್ದಾಡಿದ ದಿನಗಳು ನೆನಪಾದವು, ಥೇಟು ಯಶವಂತ ಚಿತ್ತಾಲರ ಕತೆಯ ಪಾತ್ರದಂತೆ, ಈ ಅಭಯನೆಂಬ ಹುಡುಗ ನನ್ನ ಮುಂದೆ ಧುತ್ತೆಂದು ಪ್ರತ್ಯಕ್ಷನಾಗಿ ನನ್ನದೇ ಭೂತವಾಗಿ ಕುಣಿಯತೊಡಗಿದ್ದ. ಈತ ಜಾಸ್ತಿ ದಣಿಯುವುದಕ್ಕೆ ಮೊದಲೇ ವಾಪಸ್ ಊರಿಗೆ ಹೋಗಿ ಅಪ್ಪ ಅಮ್ಮಂದಿರ ಬೆಚ್ಚಗಿನ ಪ್ರೀತಿಯಲ್ಲಿ ಸುಖವಾಗಿರಲಿ ಅಂತ ಮನಸ್ಸು ಹೇಳುತ್ತಿತ್ತು.

ಹೆಸರಿನ ಮುಂದೆ ಡಿಗ್ರಿಗಳನ್ನು ತಗಲಿಸಿಕೊಂಡು ಬರುವ ಹುಡುಗರನ್ನು ಕಂಡರೆ ಗಾಂಧಿನಗರಕ್ಕೆ ಅಲರ್ಜಿ. ಡಬ್ಬಲ್ ಗ್ರಾಜುವೇಟ್ ಪಡೆದ ಪದವೀಧರ ಬ್ಯಾಂಕಲ್ಲಿ ಅಟೆಂಡರ್ ಕೆಲಸಕ್ಕೆ ಅರ್ಜಿ ಹಾಕಿದರೆ ಹೇಗಿರುತ್ತೋ ಹಾಗೆ. ಅದರಲ್ಲೂ ಅಭಯ ಪೂನಾ ಇನ್ ಸ್ಟಿಟ್ಯೂಟಿಂದ ನಿರ್ದೇಶನದಲ್ಲಿ ಪದವಿ ಪಡೆದುಕೊಂಡು ಬಂದವರು. ಇಂಥವರು ಏನಿದ್ದರೂ ಆರ್ಟ್ ಸಿನಿಮಾ ಮಾಡುವುದಕ್ಕೆ ಸರಿ ಅನ್ನುವುದು ಇಲ್ಲಿರುವವರ ಪೂರ್ವಾಗ್ರಹ. ಅದಕ್ಕೆ ತಕ್ಕಂತೆ ಹಾಗೆ ಬಂದವರಲ್ಲೂ ಒಂದು ಹ್ಯಾಂಗೋವರ್ ಇರುತ್ತದೆ. ಶಾಸ್ತ್ರಬದ್ಧವಾಗಿ ಸಿನಿಮಾ ಭಾಷೆಯನ್ನು ಅಧ್ಯಯನ ಮಾಡಿದವರಿಗೆ ಇಲ್ಲಿರುವ ಅಶಿಸ್ತು ಪಥ್ಯವಾಗುವುದು ಕಷ್ಟ. ಆದರೆ ವಿಶೇಷವೆಂದರೆ ಅಭಯನಲ್ಲಿ ಅಂಥಾ ಯಾವುದೇ ಅಹಂ ಆಗಲಿ, ಮೇಲರಿಮೆಯಾಗಲಿ ಇರಲಿಲ್ಲ. ಚಾಕ್ಲೇಟಿಗೆ ಹಠ ಮಾಡುವ ಎಳೆಯ ಮಗುವಿನಂತೆ ಒಂದೊಳ್ಳೇ ಸಿನಿಮಾ ಮಾಡಲೇಬೇಕು ಅನ್ನುವ ಗಟ್ಟಿ ನಿರ್ಧಾರದೊಂದಿಗೇ ಆತ ಬಂದಿದ್ದರು. ಆವರ ಸಂಕೋಚದ ಹೊದಿಕೆಯ ಒಳಗೆ ಅತ್ಮವಿಶ್ವಾಸ ಭದ್ರವಾಗಿ ಕುಳಿತಿತ್ತು.  ಆದರೆ ನನಗ್ಯಾಕೋ ಅನುಮಾನ, ಈ ವ್ಯವಸ್ಥೆಯೊಳಗೆ ಈ ಹುಡುಗ ಬಚಾವಾಗುತ್ತಾನಾ?ಈಗ ಅನಿಸುತ್ತಿದೆ, ಅದೆಲ್ಲಾ ನಾನೇ ಅವರ ಮೇಲೆ ಹೇರಿದ ಕಲ್ಪಿತ ಅಭದ್ರತೆಯೇ ಇರಬೇಕು ಅಂತ.

jogi, udaya marakini image

ನಾನು ಮತ್ತು ಜೋಗಿ ಅಭಯನ ಬಾಯಲ್ಲಿ ‘ಶಿಕಾರಿ’ಕತೆ ಕೇಳಿದೆವು. ಕೇಳುವುದಕ್ಕೆ ಬಹಳ ಸೊಗಸಾದ ಕತೆ, ಬೆಂಗಳೂರಿನ ನಡುರಾತ್ರಿಯಲ್ಲಿ ಬೀದಿಯಲ್ಲಿ ಅಲೆದಾಡುತ್ತಿದ್ದ ವ್ಯಕ್ತಿಯ ಸ್ಪಪ್ನಗಳಿಂದ ಆರಂಭವಾಗುವ ಕತೆಯದು. ಭಟ್ಟರ ಶೈಲಿಯಲ್ಲಿ ಹೇಳುವುದಾದರೆ ಕತೆಯಲ್ಲಿ ಹೈ ವೋಲ್ಟೇಜು ಕಮರ್ಶಿಯಲ್ ಕರೆಂಟು ಕಡಿಮೆಯಿತ್ತು.  ಹಾಗಂತ ಹೇಳಿದರೆ ಆಭಯ ಎಲ್ಲಿ ಬೇಜಾರಾಗುತ್ತಾನೋ ಅಂತ ಅದನ್ನು ಸುತ್ತಿಬಳಸಿ ಹೇಳುವುದಕ್ಕೆ ಪ್ರಯತ್ನ ಪಟ್ಟೆವು. ವಿಚಿತ್ರವೆಂದರೆ ಅಭಯ ಎಲ್ಲಾ ಬದಲಾವಣೆಗೂ ಸಿದ್ಧವಾಗಿದ್ದರು. ಕೊಡಿಗೇಹಳ್ಳಿ ಬಸ್ ಸ್ಟಾಪ್ ಹಿಂದಿರುವ ಶೆಟ್ಟರ ಪುಟ್ಟ ಕೋಣೆಯಲ್ಲಿ ಪ್ರತಿದಿನ ಮಧ್ಯರಾತ್ರಿ ತನಕ ಕತೆಯ ಬಗ್ಗೆ ಚರ್ಚೆ. ಆಮೇಲೆ ಆ ಕಲ್ಲುಕರಗುವ ಹೊತ್ತಲ್ಲಿ ಅಭಯ ತನ್ನ ಬೈಕು ತೆಗೆದುಕೊಂಡು ದೂರದಲ್ಲೆಲ್ಲೋ ಇದ್ದ ತನ್ನ ಗೂಡಿಗೆ ಹೊರಟುಹೋಗುತ್ತಿದ್ದರು. ಮಾರನೇ ದಿನ ಆರೂವರೆಗೆ ಮತ್ತೆ ಹಾಜರ್. ‘ಶಿಕಾರಿ’ಗೊಂದು ಕಮರ್ಶಿಯಲ್ ಸ್ಪರ್ಶ ಬಂತು, ಹಾಗಂತ ನಾವು ಅಂದುಕೊಂಡೆವು. ಆದರೆ ಅಷ್ಟೆಲ್ಲಾ ಆದಮೇಲೆ ಶೆಟ್ಟರು ಸಿನಿಮಾದಿಂದ ಹಿಂದೆಸರಿದರು. ಅಭಯ ಮತ್ತೆ ನಿರುದ್ಯೋಗಿಯಾದರು. ಈ ಮಧ್ಯೆ ಅವರ ಮದುವೆಯಾಯಿತು,. ಅದೇನು ಧೈರ್ಯವೋ ಏನೋ ಕೈಯಲ್ಲಿ ಕೆಲಸವಿಲ್ಲದಿದ್ದರೂ ಪತ್ನಿಯನ್ನು ಕರಕೊಂಡು ಬೆಂಗಳೂರಿಗೆ ಬಂದು ಮನೆಮಾಡಿದರು. ಮದುವೆಯಾದ ಮೇಲೆ ಅಭಯ ನನ್ನ ಸಂಬಂಧಿಕನಾದರು. ಆತನ ಹೆಂಡತಿ ರಶ್ಮಿ,  ನನಗೆ ಅಕ್ಷರ ಕಲಿಸಿದ ಅಡ್ಯನಡ್ಕದ ಪ್ರೈಮರಿ ಸ್ಕೂಲಿನ ಮುಖ್ಯೋಪಾಧ್ಯಾಯರಾಗಿದ್ದ ಉಪಾಧ್ಯಾಯ ಮಾಸ್ಟ್ರ ಮೊಮ್ಮಗಳು.

abhay simha, vijayamma, b suresh, shylaja nag

‘ಶಿಕಾರಿ’ಪ್ರಾಜೆಕ್ಟು ಅರ್ಧಕ್ಕೆ ನಿಂತರೂ ಅಭಯ ಹತಾಶರಾಗಲಿಲ್ಲ.  ನಾನಾಗ ಸುವರ್ಣ ನ್ಯೂಸ್ ಸೇರಿಕೊಂಡಿದ್ದೆ. ಅಲ್ಲಿಗೆ ಒಂದು ದಿನ ಅಭಯ ಪತ್ನಿಯೊಂದಿಗೆ ಬಂದು ಆಕೆಗೆ ಆಂಕರ್ ಆಗುವ ಆಸೆಯಿದೆ ಅಂದರು.  ಸ್ಕ್ರೀನ್ ಟೆಸ್ಟ್ ಆಯಿತು, ಓಕೆಯೂ ಆಯಿತು. ಅದೇನೋ ಕಾರಣಕ್ಕೆ ರಶ್ಮಿಗೆ ಅಪಾಯಿಂಟ್ ಮೆಂಟ್ ಆರ್ಡರ್ ಸಿಗುವುದು ವಿಳಂಬವಾಗುತ್ತಾ ಹೋಯಿತು. ಅಭಯ ಮತ್ತೆ ಬಂದರು. ಚಾನೆಲ್ಲಿಗೆ  ನಾನೊಂದು ಟ್ರಾವಲೋಗ್ ಕಾರ್ಯಕ್ರಮ ಮಾಡ್ತೀನಿ ಅಂದರು. ಅದಕ್ಕೂ ಮುಹೂರ್ತ ಒದಗಿ ಬರಲಿಲ್ಲ. ಅದಾಗಿ ಸ್ವಲ್ಪ ದಿನದಲ್ಲಿ ರಶ್ಮಿಗೆ ಸೀರಿಯಲ್ಲುಗಳಲ್ಲಿ ಅವಕಾಶ ಸಿಕ್ಕಿತು. ಈಗ ಆಕೆ ಟೀವಿ ಸ್ಟಾರ್ . ಆಭಯನಿಗೂ ನಿರ್ಮಾಪಕರು ಸಿಕ್ಕಿದರು. ‘ಶಿಕಾರಿ’ಹೊರಗೆ ಬಂತು, ಯಶಸ್ಸಾಗದೇ ಇದ್ದರೂ ಹೆಸರು ಬಂತು. ಅದಕ್ಕೂ ಮುಂಚೆ ‘ಗುಬ್ಬಚ್ಚಿ’ಗೆ ಪ್ರಶಸ್ತಿ ಬಂದಿತ್ತು. ಈಗ ‘ಸಕ್ಕರೆ’. ಮೊದಲು ಕಲಾತ್ಮಕ ಚಿತ್ರ, ಎರಡನೆಯದ್ದು ಅರೆಕಮರ್ಷಿಯಲ್ ಚಿತ್ರ, ಮೂರನೆಯದ್ದು ಪಕ್ಕಾ ಕಮರ್ಷಿಯಲ್ ಚಿತ್ರ.

abhay simha, k manju, mammootty

‘ಶಿಕಾರಿ’ಡಬ್ಬಿಂಗ್ ಸಂದರ್ಭದಲ್ಲಿ ಅಭಯ ಫೋನ್ ಮಾಡಿ ಸಿನಿಮಾ ಚೆನ್ನಾಗಿ ಬಂದಿದೆ ಅಂದಿದ್ದರು. ಆಮೇಲೆ ಅವರು ನನ್ನ ವ್ಯಾಪ್ತಿ ಪ್ರದೇಶದಿಂದ ದೂರವಾದರು. ‘ಸಕ್ಕರೆ’ಚಿತ್ರದ ವಿಮರ್ಶೆಗಳನ್ನು ಓದುತ್ತಿದ್ದಂತೆಯೇ ಹಳೆಯ ಅಭಯ ನೆನಪಾದರು. ನನ್ನ ಭಯ ಮತ್ತು ಊಹೆಗಳನ್ನು ಸುಳ್ಳು ಮಾಡಿದ್ದಕ್ಕೆ ಅವರಿಗೊಂದು ಥ್ಯಾಂಕ್ಸ್. ಸಿದ್ಧಸೂತ್ರದ ಬೌಂಡರಿಯಾಚೆ ಜಿಗಿಯುವುದಕ್ಕೆ ಬೆದರುವ ಕನ್ನಡ ಚಿತ್ರರಂಗದೊಳಗೆ, ತನ್ನ ರುಚಿ ಮತ್ತು ಅಭಿರುಚಿಯನ್ನು ಬಿಟ್ಟುಕೊಡದೆಯೇ ಅಭಯ ತನ್ನದೇ ಆದ ಒಂದು ಸ್ಪೇಸ್ ಹುಡುಕಿಕೊಂಡಿದ್ದಾರೆ. ಇದು ಬಾಗಿಲಾಚೆ ಕಾಯುತ್ತಿರುವ ಮಿಕ್ಕ ವಿದ್ಯಾವಂತ ಸಿನಿಮಾ ನಿರ್ದೇಶಕರಿಗೆ ಸ್ಫೂರ್ತಿ ನೀಡಬಹುದು.ಅಭಯನಂಥ ಹತ್ತಾರು ಹುಡುಗರು ಒಳಗೆ ಬಂದರೆ ಶುದ್ಧ ಕಮರ್ಷಿಯಲ್ ಚಿತ್ರ ಎಂಬ ಹೊಸ ಪ್ರಕಾರವೇ ಹುಟ್ಟಿಕೊಳ್ಳಬಹುದು, ಬಿ.ಸುರೇಶ ಹೇಳಿದ ಹಾಗೆ `ಒರಗು ಗೋಡೆಗಳನ್ನು ಹುಡುಕಿಕೊಳ್ಳದೇ’ಸಿನಿಮಾ ಮಾಡುವವರ ಸಂತತಿ ಬೆಳೆಯಬಹುದು.

ಗಾಂಧೀಜಿ ರಾಮರಾಜ್ಯದ ಕನಸು ಕಂಡಷ್ಟೇ ಮುಗ್ಥತೆಯಿಂದ ನಾನು ಅಂಥಾದ್ದೊಂದು ಕನಸು ಕಾಣುತ್ತಿದ್ದೇನೆ.

Also See

Uma Column 4 - ಭಟ್ರ ಕ್ವಾರ್ಟರ್ರು ಎಂಬ ಸೀರಿಯಸ್ ಮ್ಯಾಟರ್ರು

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.