` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yogaraj bhat image
yogaraj bhat

ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು, ಹೊರಗೆ ಹಾಕವ್ಳೆ ವೈಫು..

ಗಣೇಶನ ಹಬ್ಬ ಇನ್ನೂ ಮುಗಿದಿಲ್ವಾ ಅಂತ ಅಂದುಕೊಳ್ಳುತ್ತಾ ಹೊರಗೆ ನೋಡಿದೆ. ಯಾವ ಪೆಂಡಾಲೂ ಕಾಣಿಸಲಿಲ್ಲ, ಸ್ಪೀಕರ್ರೂ  ಕಾಣಿಸಲಿಲ್ಲ. ಬಸ್ಸು ಪದ್ಮನಾಭನಗರದಿಂದ ಮೆಜೆಸ್ಟಿಕ್ ಗೆ ಹೋಗುತ್ತಿತ್ತು.

ಕಣ್ತುಂಬ ನೀರು ಬಾಯ್ತುಂಬ ಬೀರು...ಹಾಡು ಜೋರಾಯಿತು.  ಈ ಸೌಂಡು ಹೊರಗಿನದ್ದಲ್ಲ, ಒಳಗಿನದ್ದೇ ಅಂತ ಜ್ಞಾನೋದಯವಾಗುವುದಕ್ಕೆ ಸ್ವಲ್ಪ ಹೊತ್ತೇ ಹಿಡಿಯಿತು. ಹಿಂದಿನ ಸೀಟಲ್ಲಿ ಕುಳಿತಿದ್ದ ಹುಡುಗ ಮೈಕನ್ನೂ ನಾಚಿಸುವಷ್ಟು ಜೋರಾಗಿ ಮೊಬೈಲಲ್ಲಿ ಹಾಡು ಹಾಕಿದ್ದ. ಆಮೋಡ ಕವಿದ ಮುಸ್ಸಂಜೆಗೂ ಹಾಡಿನ ಸಾಹಿತ್ಯಕ್ಕೂ ಒಂಥರಾ ಮ್ಯಾಚ್ ಆಗಿ ಬಸ್ಸಲ್ಲಿರುವವರೆಲ್ಲಾ ಮೂಡಿಗೆ ಬಂದಿದ್ದರು. ತಿರುಗಿ ನೋಡಿದೆ, ಅಬ್ಬಬ್ಬಾ ಅಂದರೆ ಹದಿನಾಲ್ಕು ವರ್ಷ ಇರಬಹುದು ಅವನಿಗೆ. ಮೊಬೈಲನ್ನು ಕಿವಿಗೆ ಪೇಸ್ಟ್ ಮಾಡಿಕೊಂಡಿದ್ದ, ಪಕ್ಕದಲ್ಲಿರುವಾತ ಅವನ ಕಿವಿಗೆ ತನ್ನ ಕಿವಿಯನ್ನು ಅಂಟಿಸಿಕೊಂಡಿದ್ದ. ಅವರಿಬ್ಬರಿಗೆ ತಾವು ಬಸ್ಸಲ್ಲಿದ್ದೀವಿ ಅನ್ನೋದೇ ಮರೆತುಹೋಗಿತ್ತು.

ನಿಜವಾಗ್ಲೂ ಬಾರು ಗಂಡ್ಮಕ್ಕಳ ತವರು....ಅದೃಷ್ಟವಶಾತ್ ಬಸ್ಸಲ್ಲಿ ಗಂಡುಮಕ್ಕಳೇ ಜಾಸ್ತಿಯಿದ್ದರು.

yogaraj bhat

‘ಏನದು, ಸಿನಿಮಾ ಹಾಡಾ?’ಪಕ್ಕದಲ್ಲಿ ಕುಳಿತಿದ್ದ  ಹಿರಿಯ ಚೇತನ ನನ್ನನ್ನು ಕೇಳಿತು. ಮುಂದಿನಭೀಕರಕ್ಷಣಗಳನ್ನು ಊಹಿಸುತ್ತಾ ಚಿಂತಾಕ್ರಾಂತನಾಗಿ ಹೌದು ಅಂದೆ. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಆ ವಯೋವೃದ್ಧರು ಈ ಹಾಡನ್ನೇ ಉದಾಹರಣೆಯಾಗಿಟ್ಟುಕೊಂಡು ಇಂದಿನ ಕನ್ನಡ ಸಿನಿಮಾ ಸಾಹಿತ್ಯ ಎಷ್ಟು ಗಬ್ಬೆಬ್ಬುಹೋಗಿದೆ ಅನ್ನುವುದರ ಬಗ್ಗೆ ಸಿಟಿ ಮಾರ್ಕೆಟ್ಟು ಸ್ಟಾಪ್  ಬರುವ ತನಕ ಚಚ್ಚಿದರು. ಹಾಡು ಕೇಳುವುದೋ ಅಥವಾ ಈ ಹಿರಿಯರ ‘ಓತ್ಲಾ ಹಿತವಚನ’ಕೇಳುವುದೋ ಅನ್ನುವುದು ಗೊತ್ತಾಗದೇ ಕಿವುಡನ ಮಾಡಯ್ಯಾ ತಂದೆ ಅಂದುಕೊಂಡು ಕುಳಿತೆ. ಅವರ ಸಾತ್ವಿಕ ಆಕ್ರೋಶ ನೋಡುತ್ತಿದ್ದ ಹಾಗೆ ಹಿರಿಯ ನಟ ರಾಜೇಶ್ ನೆನಪಾದರು. ‘ಹಳೇ ಪಾತ್ರೆ ಹಳೇ ಕಬ್ಬಿಣ..’ಹಾಡು ಜನಪ್ರಿಯವಾದಾಗ ರಾಜೇಶ್ ಕೂಡಾ ಭಟ್ಟರ ಮೇಲೆ ಹರಿಹಾಯ್ದಿದ್ದರು. ಕನ್ನಡ ಭಾಷೆ ಮತ್ತು ಸಂಸ್ಕೃತಿ ಹಾಳಾಗುತ್ತಿರುವುದು ಇಂಥವರಿಂದಲೇ ಎಂಬ ತೀರ್ಮಾನಕ್ಕೂ ಬಂದಿದ್ದರು. ಈಗ ಈ ಹಿರಿಯರು ಬೈಯ್ಯುತ್ತಿದ್ದಾರೆ ಅಂದಮೇಲೆ ಯೋಗರಾಜ ಭಟ್ಟರು ಹಿರಿಯ ತಲೆಗಳ ಪಾಲಿಗೆ ಶತ್ರುವಾಗಿದ್ದಾರೆ ಅನ್ನೋದು  ಗ್ಯಾರಂಟಿಯಾಯಿತು. ಜೊತೆಗೆ ಭಟ್ಟರ ಚಿತ್ರಗಳನ್ನೂ ಈ ವಯೋಮಾನದ ಜನರು ನೋಡಲಾರರು ಅನ್ನುವ ಅನುಮಾನವೂ ಕಾಡಿತು. ಹೋಗಲಿ ಬಿಡಿ, ಅಂಥಾ  ನಷ್ಟವೇನೂ ಆಗೋಲ್ಲ. ವಯಸ್ಸಾದವರು ಕನ್ನಡ ಚಿತ್ರಗಳನ್ನು ನೋಡೋದು ಬಿಟ್ಟು,  ಸೀರಿಯಲ್ ಕಡೆ ಪಕ್ಷಾಂತರ ಮಾಡಿ ಬಹಳ ವರ್ಷಗಳೇ ಆಗಿಹೋಗಿವೆ ಅಂತ ಭಟ್ಟರು ಹೇಳಬಹುದೇನೋ?

ಲವ್ವು, ನೋವು ಎರಡೂ ಅವಳಿ ಜವಳಿ ಇದ್ದಂಗೆ
ಮದುವೆ ಮಕ್ಕಳು ಇತ್ಯಾದಿ...ಹಾವು ಬಿಟ್ಟುಕೊಂಡಂಗೆ
mani song recording - yogaraj bhat, shankar mahadevan, raju, kari subbu

ಹಾಡು ಬಾರ್ ನಿಂದ ಮನೆಯ ಚಾವಡಿಗೆ ಶಿಫ್ಟ್ಟ್ ಆಯಿತು. ‘ಯಾರವ್ರು ಹಾಡು ಬರೆದ ಪುಣ್ಯಾತ್ಮ?’ತಮ್ಮ ಭಾಷಣದ ಮಧ್ಯೆಯೇ ಹಿರಿಯರು ಒಂದು  ಪ್ರಶ್ನೆಯ ಕೂರಂಬನ್ನು ಎಸೆದರು.

‘ಯೋಗರಾಜ್ ಭಟ್ ಅಂತ. ಆಕ್ಚುವಲಿಅವರು ತುಂಬಾ ಒಳ್ಳೆಯವರು..’ಅಂತೇನೋ ಹೇಳೋದಕ್ಕೆ ಹೋದೆ.

‘ಒಳ್ಳೆಯವರು ಅಂತೀರಾ, ಹೆಸರಿನ ಜೊತೆ ಭಟ್ ಅಂತ ಬೇರೆ ಸೇರಿಸ್ಕೊಂಡಿದಾರೆ,. ಅವರಿಗಿಂಥಾ ಹಾಡು ಬರೆಯೋ ಕರ್ಮ ಯಾಕೆ ಬಂತು?.ಛೆ..’

ಹಾಡಿಗೂ ಜಾತಿಯ ಸೋಂಕಾ?..ನಾನೂ ಛೆಛೆ ಅಂದೆ ಮನಸ್ಸಲ್ಲೇ.

‘ಅಲ್ರೀ ನೀವೇ ಯೋಚನೆ ಮಾಡಿ. ಇಂಥಾ ಹಾಡುಗಳನ್ನ ಕೇಳ್ತಾ ಇದ್ರೆ ಹುಡುಗ್ರು ಕೆಟ್ಟೋಗೋಲ್ವಾ?’.

ranga sslc launch image - yogaraj bhat, n kumar, sudeep

ಇದು ಒಳ್ಳೇ ಪಾಯಿಂಟು ಅನಿಸಿತು.  ಆ ಹದಿನಾಲ್ಕರ ಹುಡುಗರು ಕೈಯಲ್ಲಿ ಬಾಟ್ಲು ಹಿಡಿದುಕೊಂಡು ‘ಕಣ್ತುಂಬಾ ನೀರು ಬಾಯ್ತುಂಬಾ ಬೀರು’ಅಂತ ಕುಣಿದಾಡುವ ದೃಶ್ಯ ಕಣ್ಮುಂದೆ ಬಂದು ಕೊಂಚ ದುಃಖವೂ ಆಯಿತು. ಭಟ್ಟರ ಸಾಹಿತ್ಯದಿಂದಾಗಿ ಯುವಜನಾಂಗ ದಾರಿತಪ್ಪುತ್ತಿದೆಯಾ?ಜನರಿಗೆ ಈ ಬಗ್ಗೆ ಯೋಚನೆ ಮಾಡುವುದಕ್ಕೆ ಪುರುಸೊತ್ತಿಲ್ಲದೇ ಇದ್ದರೂ,ಟೀವಿ ಚಾನೆಲ್ಲುಗಳ ಡಿಸ್ಕಷನ್ ಗೆ  ಒಳ್ಲೇ ಸಬ್ಜೆಕ್ಟು ಆಗಬಹುದು. ಹಂಸಲೇಖಾ ಅವರು ನಿಂಬೆಹಣ್ಣು, ಬಾಲು ಅಂತೆಲ್ಲಾ ಬರೆದಾಗ ಚಾನೆಲ್ಲುಗಳು ಇರಲಿಲ್ಲ. ಪತ್ರಿಕೆಗಳ ಓದುಗರ ಅಂಕಣದಲ್ಲಷ್ಟೇ ಅದು ಇಶ್ಯೂ ಆಗಿತ್ತು. ಅದರಿಂದಾಗಿ ಹಂಸಲೇಖಾ ಇನ್ನಷ್ಟು ಜನಪ್ರಿಯರಾದರು. ಈಗ ಭಟ್ಟರ ಸರದಿ. ಆದರೂ ಭಟ್ಟರನ್ನು ಬೈಯ್ಯೋದಕ್ಕೆ ಮನಸ್ಸು ಒಪ್ಪಲಿಲ್ಲ.

‘ಸರ್, ಆ ಹುಡುಗ್ರು ಸಾಹಿತ್ಯಕ್ಕೋಸ್ಕರ ಹಾಡು ಕೇಳ್ತಿಲ್ಲ. ಹಾಡಿನಲ್ಲಿರುವ ರಿದಂ ಇದೆಯಲ್ಲಾ. ಅದೇ ಅವರಿಗೆ ಇಷ್ಟ ಆಗಿರೋದು. ಉದಾಹರಣೆಗೆ ಬೋರ್ಡ್ ಇರದ ಬಸ್ಸಲ್ಲಿ ಹಾರಿ ಬಂದ ಚೋಕರಿ ಅನ್ನೋ ಹಾಡು ಕೇಳಿದ್ದೀರಾ?’ ಅಂತ ನನ್ನ ಜನರಲ್ ನಾಲೆಡ್ಜ್ ಪ್ರದರ್ಶನ ಮಾಡಿದೆ.

‘ಅದಿನ್ನೊಂದು ದರಿದ್ರ ಹಾಡು. ಆ ಪಂಕಜಾ ಅನ್ನೋ ಹೆಸರಿನ ಹುಡುಗಿ ಗತಿಯೇನಾಗಬೇಕು ಹೇಳಿ’. ಅವರು ಥೇಟು ಲಾಯರ್ ಥರ ಪಾಟಿಸವಾಲು ಹಾಕಿದರು.

‘ಹಾಡು ಬೇರೆ , ಜೀವನ ಬೇರೆ,. ಅದನ್ನೆಲ್ಲಾ ಅಷ್ಟೊಂದು ಸೀರಿಯಸ್ಸಾಗಿ ತೆಗೊಂಡ್ರೆ ಹೇಗೆ?’ ನಾನು ದ್ರಾವಿಡ್ ಥರ ಡಿಫೆನ್ಸು ಆಡಿದೆ.

‘ನಾವು ಸೀರಿಯಸ್ಸಾಗಿ ತೆಗೊಳ್ಳೋಲ್ಲಾರೀ. ಮನೇಲಿ ಚೋಟುದ್ದ ಮಕ್ಕಳು  ಎಲ್ಲರ ಮುಂದೆ ಬಾಟ್ಲುಗೀಟ್ಲು ಅಂತ ಹಾಡಿದ್ರೆ ಅಪ್ಪಅಮ್ಮಂಗೆ ಮುಜುಗರ ಆಗೋಲ್ವೇ ಹೇಳಿ?’ ಪ್ರಶ್ನೆ ಕಪಾಳಕ್ಕೆ ಹೊಡೆದಂತಿತ್ತು.

‘ಆದರೆ ಆ ಹಾಡಲ್ಲೊಂದು ಫಿಲಾಸಫಿ ಇದೆ ನೋಡಿ.ಬಾಳು ಅಂದ್ರೆ ಮೆಡಿಸನ್ನೇ ಇಲ್ದೇ ಇರೋ ಖಾಯಿಲೆಅಂತ.  ಹಳೇ ಪಾತ್ರೆ ಹಾಡಲ್ಲೂ ಅಂತಾದ್ದೇ ಫಿಲಾಸಫಿ ಇತ್ತು....’ಭಟ್ಟರನ್ನು ಕಾಪಾಡುವುದಕ್ಕೆ ಅಂತಿಮ ಪ್ರಯತ್ನ ಮಾಡಿದೆ.

‘ಫಿಲಾಸಫಿ ಮನೆ ಹಾಳಾಗಿಹೋಗ್ಲಿ.  ಇಂಥಾದ್ದನ್ನೆಲ್ಲಾ ಯಾವ ಪುರುಷಾರ್ಥಕ್ಕೆ ಬರೀಬೇಕು ಹೇಳಿ?ಉದಯಶಂಕರ್ ಎಂಥಾ ಸೊಗಸಾದ ಹಾಡು ಬರೀತಿದ್ರು ಗೊತ್ತಾ..?’

‘ಅದು ಆ ಕಾಲಕ್ಕೆ ಇದು ಈ ಕಾಲಕ್ಕೆ..’  ನನ್ನ ಮಾತು ಮುಗಿಸೋ ಮುಂಚೇನೇ ಎದ್ದುನಿಂತ ಹಿರಿಯರು ‘ಬದಲಾಗಿರೋದು ಕಾಲ ಅಲ್ರೀ, ಮನುಷ್ಯರು. ಅದರಿಂದಾನೇ ಇಷ್ಟೆಲ್ಲಾ ಅನಾಚಾರ ಆಗ್ತಿರೋದು’ಎಂದು ಗಟ್ಟಿಯಾಗಿಯೇ ರೇಗುತ್ತಾ  ಬಸ್ಸಿಂದ ಇಳಿದು ಹೋದರು. ಹಾಡು ಕೊನೆಯ ಚರಣಕ್ಕೆ ಬಂದಿತ್ತು.

ಮನೇಗ್ ಹೋದ್ರೆ ಅದೇ ಹೆಂಡ್ತಿ...ಹಸ್ರು ಕಲರ್ ಹಳೇ ನೈಟಿ
ಬ್ಯಾಂಕು ಸಾಲ ಕಾರು ಗ್ಯಾಸು ಮನೆ ಬಾಡ್ಗೆ ಮಕ್ಳು ಫೀಸು...

ನೀವೀಗ ಮನೇಲಿರುವ ಹಳೇ ವಸ್ತುಗಳನ್ನೆಲ್ಲಾ ಚಿಂದಿ ಆಯುವವರಿಗೆ ಕೊಡಬೇಕಾಗಿಲ್ಲ. ಭಟ್ಟರ ಕೈಗೆ ಕೊಟ್ಟುಬಿಡಿ, ಅವರದನ್ನು ಹಾಡಾಗಿಸುತ್ತಾರೆ. ಚಿಂದಿ ಹಾಡಾಗುತ್ತದೆ, ಹಾಡು ಚಿಂದಿಯಾಗುತ್ತದೆ. ಅಷ್ಟಕ್ಕೂ ಈಗಿನ ಸಿನಿಮಾ ಗೀತೆಗಳು ಬೇಡುವುದು ರಸಾನುಭೂತಿಯನ್ನಲ್ಲ, ಬದಲಾಗಿ ಎರಡು ಚಪ್ಪಾಳೆ ಮತ್ತು ಒಂದು ಸಿಳ್ಳೆ. ತತ್ಕಾಲ್ ಯೋಜನೆಯಲ್ಲಿ ಹಿಟ್ ಆಗುವ ಸರಕುಗಳಿವು. ಚಿತ್ರಸಂತೆಯಲ್ಲಿ ಗಿರಾಕಿಗಳು ಇರುವ ತನಕ ಇಂಥಾ ಗೀತೆಗಳು ಗಿರಕಿ ಹೊಡೆಯುತ್ತಲೇ ಇರುತ್ತವೆ.

------------------

yogaraj bhat

ಮೊನ್ನೆ ಅಕ್ಟೋಬರ್ 8ಕ್ಕೆ ಭಟ್ಟರಿಗೆ 39 ತುಂಬಿದಾಗ ಮೇಲಿನ ಪ್ರಸಂಗವನ್ನು ಬರೆಯಬೇಕು ಅಂದುಕೊಂಡಿದ್ದೆ. ಶುಭಾಶಯ ಹೇಳಬೇಕಾದ ಸಮಯದಲ್ಲಿ ಅಪಸ್ವರ ಯಾಕೆ ಅಂತ ಸುಮ್ಮನಾದೆ. ಅಷ್ಟಕ್ಕೂ ಇದು ಹೇಳುವ ಸಮಯವಲ್ಲ, ಕೇಳುವ ಸಮಯ. ಯೋಗರಾಜ ಭಟ್ಟರಿಗೆ ಈಗ ರಾಜಯೋಗ ನಡೀತಾ ಇದೆ.  ಈಗ ಅವರ ಬರೆದಿದ್ದೆಲ್ಲಾ ಚಿನ್ನ. ಎಲ್ಲಿಯತನಕ ಅಂದರೆ ಡೈರೆಕ್ಟರ್ ಭಟ್ರು ಮತ್ತು ರೈಟರ್ ಭಟ್ರು- ಇವರಿಬ್ಬರ ಮಧ್ಯೆ ಯಾರು ಬೆಟರ್ ಅನ್ನುವ ಪ್ರಶ್ನೆಯೊಂದು ಲೇಟೆಸ್ಟಾಗಿ  ಹುಟ್ಟಿಕೊಂಡಿದೆ. ಬರೆವಣಿಗೆಯನ್ನೇ ನೆಚ್ಚಿಕೊಂಡಿರುವವರು ನಿರ್ದೇಶಕರಾಗಿ ಗೆದ್ದ ಉದಾಹರಣೆಗಳು ನಮ್ಮಲ್ಲಿ ಬಹಳ ಕಡಿಮೆ. ನಾಗತಿಹಳ್ಳಿ ಆರಂಭದಲ್ಲಿ ಯಶಸ್ಸಿನ ರುಚಿ ಕಂಡರೂ ಆಮೇಲೆ ಗೆಲ್ಲಲಿಲ್ಲ, ಟೀಎನ್. ಸೀತಾರಾಮ್ ಅವರದ್ದೂ ಅದೇ ಕತೆ, ಕೆವಿ. ರಾಜು ಚಿತ್ರಗಳಲ್ಲಿ ಮನೆಯಾಳು ಕೂಡಾ ಕನ್ನಡ ಎಂಎ ಪದವೀಧರನಷ್ಟು ಶುದ್ಧವಾಗಿ ಮಾತಾಡುತ್ತಾನೆ.  ಸೂರಿ ಮತ್ತು ಭಟ್ಟರೂ ಮೂಲತಃ ಬರಹಗಾರರೇ. ಅದೇ ಕಾರಣಕ್ಕೆ ಅವರ ಚಿತ್ರಗಳಲ್ಲಿ ಮಣಗಟ್ಟಲೆ ಡೈಲಾಗು ಇರುತ್ತದೆ. ಆದರೆ ಅವರು ಬಳಸುವ ಭಾಷೆ ಈಗಿನ ಜಮಾನಾದ್ದು. ತಮ್ಮ ಚಿತ್ರಗಳನ್ನು ನೋಡುವ ಪ್ರೇಕ್ಷಕರು ಯಾವ ವಯೋಮಾನಕ್ಕೆ ಸೇರಿದವರು ಅನ್ನುವುದರ ಸ್ಪಷ್ಟ ಕಲ್ಪನೆ ಇಬ್ಬರಿಗೂ ಇದೆ (ಹದಿನಾರರ ಆಚೆ ಮತ್ತು ನಲುವತ್ತರ ಈಚೆ). ಅವರ ಗೆಲುವಿನ ಗುಟ್ಟು ಅಲ್ಲೇ ಅಡಗಿದೆ.

paramathma launch - deepa sannidi, aindrita ray, puneet rajkumar, yogaraj bhat, jayanna

ಭಟ್ಟರು ನಿರ್ದೇಶಿಸಿದ ಸಿನಿಮಾ ಗೆಲ್ಲುತ್ತೋ ಬಿಡುತ್ತೋ ಗೊತ್ತಿಲ್ಲ, ಅವರು ಬರೆಯುವ ಹಾಡುಗಳು ಹಿಟ್ ಆಗುತ್ತವೆ ಅನ್ನುವುದಂತೂ ಗ್ಯಾರಂಟಿ. ಆ ಹಾಡುಗಳೇ ಒಂದು ಚಿತ್ರಕ್ಕೆ ಒಳ್ಳೇ ಓಪನಿಂಗ್ ತಂದುಕೊಡುತ್ತಿದೆ ಅಥವಾ ಹಾಗಂತ ನಿರ್ಮಾಪಕರು ನಂಬಿದ್ದಾರೆ. ಭಟ್ಚರ ಈ ಭರ್ಜರಿ ಬ್ಯಾಟಿಂಗ್ ಮುಂದೆ ವೃತ್ತಿಪರ ಗೀತರಚನೆಕಾರರಾದ ಕಲ್ಯಾಣ್, ನಾಗೇಂದ್ರಪ್ರಸಾದ್ ಮೊದಲಾದವರು ಕೊಂಚ ಮಂಕಾಗಿದ್ದಾರೆ. ಕಾಯ್ಕಿಣಿ ತಾವಾಗಿ ಹಿಂದೆ ಸರಿದಿದ್ದಾರೆ.  ಕೆಲವೊಮ್ಮೆ ಈ  ಹಾಡುಗಳ ಗೆಲುವೇ ಅತಿಯಾದ ನಿರೀಕ್ಷೆಯನ್ನು ಹುಟ್ಟುಹಾಕಿ ಚಿತ್ರಕ್ಕೆ ಶತ್ರುವಾಗುವ ಅಪಾಯವನ್ನೂ ಅಲ್ಲಗೆಳೆಯುವಂತಿಲ್ಲ. ‘ಪರಮಾತ್ಮ’ದಲ್ಲಿಆಗಿದ್ದು ಅದೇ ಇರಬಹುದಾ?

puneet rajkumar, yogaraj bhat

ಭಟ್ಟರ ತಂತ್ರ ಬಹಳ ಸರಳ. ಡೈಲಾಗು ಬರೆಯುವಾಗ ಅವರು ಪನ್ ಗಳನ್ನು ನೆಚ್ಚಿಕೊಳ್ಳುತ್ತಾರೆ, ಪಾತ್ರಗಳು ತಮ್ಮ  ಎದುರಾಳಿಯ ಮಾತನ್ನೇ ತುಂಡರಿಸಿ ಹೊಸ ಅರ್ಥ ಹೊಳೆಯಿಸುವ ವರಸೆಯದು. ಹಾಡು ಬರೆಯುವಾಗ ಅವರು ರೂಪಕಗಳ ಮೊರೆ ಹೋಗುತ್ತಾರೆ. ಅದು ಎಂಥಾ ರೂಪಕ?ಚಿಟ್ಟೆಗೆ ಶರ್ಟ್ ತೊಡಿಸುವಂಥಾದ್ದು. ಬೇರೆಲ್ಲಾ ಕವಿಗಳಿಗೆ ಎಳೆಬಿಸಿಲು ಬೆಳದಿಂಗಳಂತೆ ಕಂಡರೆ, ಭಟ್ಟರಿಗೆ ಬೆಳದಿಂಗಳು ಬಿಸಿಲಂತೆ ಕಾಣಿಸುತ್ತದೆ. ಇದು ರಿವರ್ಸ್ ಟೆಕ್ನಿಕ್ . ಆದರೆ ಈಗ ಹಿಂದಿ ಚಿತ್ರರಂಗದಲ್ಲಿ ಒಂದು ಕೈ ನೋಡೋದಕ್ಕೆ ಹೊರಟಿರುವ ಭಟ್ಟರು ಹಾಡು, ಡೈಲಾಗು ಹೇಗೆ ಬರೆಯಬಹುದು?  ಖಾಲಿ ಕ್ವಾರ್ಟರ್ ಶೀಷೆ ಕಿ ಥರಹ್ ಲೈಫು, ಬಾಹರ್ ಫೇಂಕ್ ದಿಯಾ ವೈಪು ಅಂತ ಬರೆಯೋಕ್ಕಾಗುತ್ತಾ?ಇಂಥಾದ್ದೊಂದು ಕಿಡಿಗೇಡಿ ಕನಸು ಕಾಣುತ್ತಾ ನನ್ನ ಇಷ್ಟದ ಗೀತೆಯೊಂದಿಗೆ ಈ ಅಂಕಣ ಮುಗಿಸುತ್ತೇನೆ.

ಚೆಂದುಟಿಯ ಪಕ್ಕದಲಿ ತುಂಬ ಹತ್ತಿರ ನಿಂತು ಗುರಿ ಇಟ್ಟು ಕಾಡಿಗೆಯ ಬೊಟ್ಟಿಡಲಾ

ಒಂದೊಳ್ಳೇ ಬೈಗುಳವ ನೀ ನುಡಿಯುವ ಹಾಗೆ ಅತಿ ತುಂಟ ಮಾತೊಂದ ನಾನಾಡಲಾ

Also See

Uma Column 3 - ಕಲ್ಲು ಕೊರಗುವ ಸಮಯ

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail - This email address is being protected from spambots. You need JavaScript enabled to view it.