` chitraloka.com | Kannada Movie News, Reviews | Image - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
radhika pandit wet image
radhika pandit

ಕಿಟಿಕಿಯಾಚೆ ನೋಡಿದೆ, ಸಣ್ಣಗೆ ಮಳೆ ಹನೀತಾ ಇತ್ತು. ವೈಪರ್ ಹಾಕಬೇಕೋ ಬೇಡ್ವೋ ಎಂದು ಕಾರು ಚಾಲಕ ಗೊಂದಲಕ್ಕೊಳಗಾಗುವಷ್ಟು ಚಿಲ್ಲರೆ ಮಳೆ.  ಬೆಂಗಳೂರಲ್ಲಿ ಈ ವರ್ಷ ದಾಖಲೆ ಮಳೆ ಸುರಿದಿದೆ ಅನ್ನುವ ಪತ್ರಿಕಾ ವರದಿ ಕಣ್ಣ ಮುಂದಿತ್ತು. ನನ್ನ ಜಾಗದಲ್ಲಿ ಒಬ್ಬ ಕನ್ನಡ ನಿರ್ಮಾಪಕನನ್ನು ಕಲ್ಪಿಸಿಕೊಂಡೆ. ಆಕಾಶದಿಂದ ನೀರು ಸುರಿದರೆ ಅವನ ಕಣ್ಣಲ್ಲೂ ನೀರು ಸುರಿಯುತ್ತದೆ.  ಅಯ್ಯೋ ವಿಧಿಯೇ.. ಮಳೆ ಶುರುವಾಯಿತಾ,ಹಾಗಿದ್ದರೆ ಜನ ಥಿಯೇಟರಿಗೆ ಬರೋದಿಲ್ಲ, ಸಿನಿಮಾ ತೋಪಾಗುವುದು ಗ್ಯಾರಂಟಿ ಎಂದು ಆತ ಮಮ್ಮಲ ಮರುಗುತ್ತಾನೆ. ಅಲ್ಲಿ ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತವಾದರೆ, ಇಲ್ಲಿ ಕನ್ನಡ ಚಿತ್ರಗಳ ಗಳಿಕೆಯೂ ಕುಸಿಯುತ್ತದೆ,  ನಿರ್ಮಾಪಕನ ಎದೆಭಾರ ಜಾಸ್ತಿಯಾಗುತ್ತದೆ, ಈ ಜಗತ್ತಲ್ಲಿ ಮಳೆಯನ್ನು ದ್ವೇಷಿಸುವ ಏಕೈಕ ವ್ಯಕ್ತಿ ಅಂದರೆ ಸಿನಿಮಾ ನಿರ್ಮಾಪಕನೇ ಇರಬಹುದು.

kannada film industry

ಹೊರಗೆ ಮಳೆ ಜೋರಾಯಿತು, ಕಿಟಿಕಿಯಿಂದ ನುಗ್ಗಿಬಂತು ಇರಿಚಲು. ನಿರ್ಮಾಪಕನ ಎದೆಯಲ್ಲಿ ಮಿಂಚು, ಸಿಡಿಲಿನ ಸಂಚಾರ. ಕಾರ್ಪೋರೇಟರುಗಳು ಮಳೆಗೂ ತಮಗೂ ಸಂಬಂಧ ಇಲ್ಲ ಅಂತ ಮುಸುಕು ಹಾಕಿ ಮಲಗಿದ್ರೆ, ನಿರ್ಮಾಪಕನಿಗೆ ಮಾತ್ರ ನಿದ್ದೆಯಿಲ್ಲ.  ಆತನ ಕಣ್ಣ ಮುಂದೆ ಕರಾಳ ಭವಿಷ್ಯ ಐಟಂ ಡ್ಯಾನ್ಸು ಮಾಡುತ್ತದೆ.   ಸಿನಿಮಾ ಬಿದ್ದು ಹೋದರೆ ಆಗಬಹುದಾದ ನಷ್ಟ,  ಫೈನಾನ್ಶಿಯರ್ ಗೆ ಕೊಡಬೇಕಾದ ತಿಂಗಳ ಬಡ್ಡಿ, ಕಲಾವಿದರಿಗೆ ಬಾಕಿಯಿಟ್ಟ ಸಂಭಾವನೆ,  ಸಾಲಕೊಟ್ಟ ಗೆಳೆಯರಿಗೆ ನೀಡಬೇಕಾದ ಉತ್ತರ,   ಈ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ಮತ್ತೊಂದು ಸಿನಿಮಾ ಮಾಡಲೇಬೇಕಾದ ಅನಿವಾರ್ಯ... ಇದೇ ಚಿತ್ರದ ಹೀರೋ ತನ್ನ ಮೇಲೆ ಅನುಕಂಪ ತೋರಿ ಮತ್ತೊಂದು ಕಾಲ್ ಷೀಟ್ ಕೊಡಬಹುದಾ?..ಅಥವಾ ಇನ್ನೊಬ್ಬ ಹೀರೋನ ಹಿಡಿಯೋದಾ?

movie affected by rain

ಮಳೆಯ ಕಾರಣಕ್ಕೋ ಅಥವಾ ಇನ್ಯಾವುದೋ ಕಾರಣಕ್ಕೋ ಸದ್ರಿ ನಿರ್ಮಾಪಕ ಅಂದುಕೊಂಡಂತೆ ಅವನ ಸಿನಿಮಾ ಫ್ಲಾಪ್ ಆಗುತ್ತದೆ. ಆತ ಪತ್ರಿಕಾಗೋಷ್ಟಿಯಲ್ಲಿ ಯಶಸ್ವಿಯಾಗಿ ತನ್ನ ವಾದ ಮಂಡಿಸುತ್ತಾನೆ.   “ಈ ವರ್ಷ ಮಳೆ ಜಾಸ್ತಿಯಾದ ಕಾರಣಕ್ಕೇ ಕನ್ನಡ ಚಿತ್ರಗಳ ಕಲೆಕ್ಷನ್ ಕಡಿಮೆಯಾಗಿದೆ”. ಇನ್ನೊಂದು ವರ್ಷ ಮಳೆಯೇ ಬರುವುದಿಲ್ಲ, ಆಗಲೂ ಆತನ ಸಿನಿಮಾ ಗೆಲ್ಲುವುದಿಲ್ಲ. ಪತ್ರಕರ್ತರು ಕೇಳದೇ ಬಿಡುವುದಿಲ್ಲ. ನಿರ್ಮಾಪಕನ ಬಳಿ ಹೊಸ ಕಾರಣ ಸಿದ್ಧವಾಗಿರುತ್ತದೆ. “ಬೆಂಗಳೂರಿನ ಜನ ಕನ್ನಡ ಚಿತ್ರಗಳನ್ನು ನೋಡುವುದಿಲ್ಲ, ಕನ್ನಡ ಚಿತ್ರಗಳಿಗೆ ಈಗ ಪ್ರೇಕ್ಷಕರಿರೋದು ಬಿ, ಸಿ, ಸೆಂಟರುಗಳಲ್ಲಿ ಮಾತ್ರ. ಅಲ್ಲಿ  ಮಳೆ ಬಂದಿಲ್ಲಾಂದ್ರೆ ಬೆಳೆಯೂ ಬರುವುದಿಲ್ಲ. ರೈತನ ಕೈಯಲ್ಲಿ ಅಕ್ಕಿಬೇಳೆ ಖರೀದಿಗೇ  ಕಾಸಿಲ್ಲಾಂದ್ರೆ ಆತ ಕನ್ನಡ ಚಿತ್ರಗಳನ್ನು ಹೇಗೆ ನೋಡುತ್ತಾನೆ, ನೀವೇ ಹೇಳಿ?”. ಮಳೆ ಬಂದರೂ ಕಷ್ಟ, ಬಾರದೇ ಇದ್ದರೂ ಕಷ್ಟ. ನಿರ್ಮಾಪಕನ ಸಂಕಷ್ಟಗಳಿಗೆ ಮುಕ್ತಿಯಿಲ್ಲ.

protest

ಗೆದ್ದವನಿಗೆ ಕಾರಣ ಬೇಕಿಲ್ಲ, ಯಾಕೆಂದರೆ ಯಶಸ್ಸು ಬೇಡುವುದು ಒಂದು ಸಂಭ್ರಮದ ಆಚರಣೆಯನ್ನು. ಸಂತೋಷ ಇರುವುದೇ ಹಂಚಿಕೊಳ್ಳುವುದಕ್ಕೆ, ದುಃಖ ಇರುವುದು ಅನುಭವಿಸುವುದಕ್ಕೆ. ಒಂದು ಸಾರ್ವತ್ರಿಕ, ಇನ್ನೊಂದು ವೈಯಕ್ತಿಕ.  ಸೋತುಹೋದವನು ಕಾರಣಗಳಿಗೆ ಹುಡುಕುತ್ತಾನೆ, ಆ ಕಾರಣಗಳೇ ತನ್ನನ್ನು ಸಂತೈಸುತ್ತವೆ ಅಂತ ನಂಬುತ್ತಾನೆ. ವಿಮರ್ಶಕ ಕೊಚ್ಚಿಹಾಕುವ ರಣೋತ್ಸಾಹದಲ್ಲಿ ಬರೀತಾನೆ – ಕತೆಯಲ್ಲಿ ದಮ್ ಇಲ್ಲ, ಚಿತ್ರಕತೆಯಲ್ಲಿ ಬಿಗಿ ಇಲ್ಲ, ಸಂಗೀತ ಸುಮಾರು, ಅಭಿನಯದ ಬಗ್ಗೆ ಹೇಳದೇ ಇದ್ದರೇ ವಾಸಿ. ನಿರ್ಮಾಪಕ ಹೇಳುತ್ತಾನೆ-  ಮೂರು ತಿಂಗಳು ಕಷ್ಟಪಟ್ಟು ಕತೆ ಮಾಡಿದ್ವಿ, ಎಲ್ಲರೂ ಚೆನ್ನಾಗಿ ಕೋಆಪರೇಟ್ ಮಾಡಿದರು, ಪಿಕ್ಟರ್ರೂ ಚೆನ್ನಾಗಿ ಬಂದಿದೆ. ಆದರೆ ಎಕ್ಸಾಮ್ ಟೈಮಲ್ಲಿ ರಿಲೀಸ್ ಮಾಡಿದ್ದೇ ಎಡವಟ್ಟಾಗಿಹೋಯಿತು. ಮಕ್ಕಳಿಗೆ ಪ್ರತಿವರ್ಷ ಯಾವ ತಿಂಗಳು ಪರೀಕ್ಷೆ ನಡೆಯತ್ತದೆ ಅನ್ನುವುದು ಆತನಿಗೆ ಗೊತ್ತಿರಲಿಲ್ವಾ?“ಗೊತ್ತಿತ್ತು ಸಾರ್, ಆದರೆ ಆ ತಿಂಗಳಲ್ಲಿ ನಾವು ರಿಲೀಸ್ ಮಾಡಿಲ್ಲಾಂದ್ರೆ ಪ್ರಾಬ್ಲಂ ಆಗಿರೋದು . ಯಾಕೆಂದರೆ ಮುಂದಿನ ತಿಂಗಳು ಎರಡು ಬಿಗ್ ಬಜೆಟ್ ಚಿತ್ರಗಳು ರಿಲೀಸ್ಗೆ ಕಾಯ್ತಾ ಇದ್ದವು.  . ಅವುಗಳ ಜೊತೆ ನಾವು ಕಾಂಪೀಟ್ ಮಾಡೋದಕ್ಕಾಗುತ್ತಾ , ನೀವೇ ಹೇಳಿ”.

ಅನುಮತಿ ಕೇಳದೇ ಬರುವ ಮಳೆ, ಹೆತ್ತವರನ್ನು ಥಿಯೇಟರಿಗೆ ಬಾರದಂತೆ ತಡೆಯುವ ಮಕ್ಕಳ ಪರೀಕ್ಷೆ, ಒಳ್ಳೆಯ ಥಿಯೇಟರ್ ಸಿಗದಿರೋ ಹಾಗೆ ಪಿತೂರಿ ಮಾಡುವ ಕಾಣದ ಕೈಗಳು, ಥಿಯೇಟರ್ ಸಿಕ್ಕರೂ ಒಂದೇ ವಾರಕ್ಕೆ ಚಿತ್ರ ಎತ್ತಂಗಡಿಯಾಗುವ ವಿಪರ್ಯಾಸ, ಪರಭಾಷಾ ಚಿತ್ರಗಳ ಕಾಟ, ಅದೃಷ್ಟದ ಆಟ,.. ನಿರ್ಮಾಪಕನನ್ನು ಕಾಡುವ ಬಾಲಪೀಡೆಗಳು ಒಂದೆರಡಲ್ಲ. ಆದರೆ ಗೆದ್ದ ಚಿತ್ರದ ನಿರ್ಮಾಪಕನ ಮಾತಿನ ವರಸೆ ಹೇಗಿರುತ್ತೆ ನೋಡಿ. “ಮಳೆ ಬರಲಿ, ಎಕ್ಸಾಮ್ ಇರಲಿ, ಒಳ್ಳೇ ಚಿತ್ರ ಬಂದರೆ ಕನ್ನಡ ಪ್ರೇಕ್ಷಕ ನೋಡೇ ನೋಡ್ತಾನೆ ಅನ್ನೋದಕ್ಕೆ ನಮ್ಮ ಪಿಕ್ಟರ್ ಗೆದ್ದಿರೋದೇ ಸಾಕ್ಷಿ”.

ಸಿನಿಮಾ ಶುರುವಾಗುವುದಕ್ಕೆ ಮುಂಚೆ ಎಲ್ಲಾ ಲೆಕ್ಕಾಚಾರಗಳೂ ಸರಿಯಾಗಿರುತ್ತವೆ. ಇಂಥಾ ನಟನ ಮೇಲೆ ಇಷ್ಟು ಬಂಡವಾಳ ಹೂಡಿದರೆ ಸೇಫು. ಬಿಕೇಟಿ ಮತ್ತು ಮೈಸೂರಿನಿಂದ ಇಷ್ಟು ಶೇರು ಗ್ಯಾರಂಟಿ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಏರಿಯಾಗಳಿಂದ ಇಷ್ಟು ಶೇರು ಬಂದೇಬರುತ್ತೆ,. ಟೀವಿ ರೈಟ್ಸ್ ನಿಂದ ಇನ್ನೊಂದಿಷ್ಟು ಅಮೌಂಟು ಬೋನಸ್ಸು. ಅಪ್ಪಿತಪ್ಪಿ ಸಿನಿಮಾ ಅವರೇಜ್ ಅನ್ನುವ ರಿಪೋರ್ಟ್ ಬಂದರೂ ಒಂದು ಕೋಟಿ ಲಾಭಕ್ಕೆ ಮೋಸವಿಲ್ಲ. ಆದರೆ ಬಿಡುಗಡೆಯಾದ ನಂತರ ಎಲ್ಲಾ ಲೆಕ್ಕಾಚಾರಗಳೂ ಒಂದೊಂದಾಗಿ ಕೈಕೊಡುತ್ತಾ ಹೋಗುತ್ತವೆ, ರೋಗಗ್ರಸ್ಥ ದೇಹದ ಅವಯವಗಳಂತೆ. ಛೆ..ತಪ್ಪು ಮಾಡಿಬಿಟ್ಟೆ ಅಂತ ನೂರಾ ಒಂದನೇ ಬಾರಿ ಹೇಳಿಕೊಳ್ಳುತ್ತಾ ಆತ ಇನ್ನೊಂದು ತಪ್ಪು ಮಾಡುವುದಕ್ಕೆ ಸಜ್ಜಾಗುತ್ತಾನೆ.

“ಸಕ್ಸೆಸ್ ಜಸ್ಟ್ ಹ್ಯಾಪನ್ಸ್, ಅದನ್ನು ನಾವು ಮುಂಚಿತವಾಗಿ ಊಹಿಸೋದಕ್ಕಾಗೋಲ್ಲ”ಅಂತ ಪದೇಪದೇ ಹೇಳುತ್ತಿದ್ದ ವಿಷ್ಣುವರ್ಧನ್ ನೆನಪಾಗುತ್ತಾರೆ. ಬಾ ಇಲ್ಲಿ ಸಂಭವಿಸು ಅಂತ ಯಶಸ್ಸನ್ನು ಕೂಗಿ ಕರೆಯುವುದಕ್ಕಾಗುವುದಿಲ್ಲ ನಿಜ,  ಹಾಗಂತ ಯಶಸ್ಸಿಗಾಗಿ ಹಂಬಲಿಸುವುದೇ ತಪ್ಪಾ?. ಯಶಸ್ಸು ಕಾಣಲಿ ಅಂತ ಇದ್ದಬದ್ದ ದೇವರಿಗೆಲ್ಲಾ ಕೈಮುಗಿದು ಕಷ್ಟಪಟ್ಟು ಸಿನಿಮಾ ಮಾಡೋದು ತಪ್ಪಾ?. ಸುಮ್ಮನೆ ಸಿನಿಮಾ ಮಾಡುತ್ತಾ ಹೋಗುವುದು ಮತ್ತು ಯಾವತ್ತೋ ಒಂದು ದಿನ ಬಂಪರ್ ಹೊಡೆಯಬಹುದು ಅಂತ ಕಾಯುತ್ತಾ ಕೂರುವುದಕ್ಕೆ ಇದೇನು ಓಸಿ ಆಟವಲ್ಲವಲ್ಲ.

protest image

ಈ ನಿರ್ಮಾಪಕರು ಅನ್ನುವ ವಿಶಿಷ್ಚ ತಳಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ನಾನು ಕಳೆದ ಇಪ್ಪತ್ತೈದು ವರ್ಷದಿಂದ ಹೆಣಗುತ್ತಲೇ ಇದ್ದೇನೆ.ನನಗೆ ಅವರ ಬಗ್ಗೆ ಪ್ರೀತಿ ಮತ್ತು ಅಷ್ಟೇ ಸಿಂಪತಿ.  ಕೆಲವೊಮ್ಮೆ ಅವರು ಈ ಲೋಕಕ್ಕೇ ಸೇರಿದವರೇ ಅಲ್ಲವೇನೋ ಅನ್ನುವ ಅನುಮಾನವೂ ಕಾಡುತ್ತದೆ. ಯಾಕೆಂದರೆ ನಮಗೆ ಸಂತೋಷ ನೀಡುವ ಸಂಗತಿಗಳು ಅವರಿಗೆ ದುಃಖವನ್ನುಂಟು ಮಾಡುತ್ತದೆ. ಟೈಟಾನಿಕ್ ನಂಥಾ ಒಳ್ಳೇ ಸಿನಿಮಾ ಗೆದ್ದಾಗ, ಅದರಿಂದಾಗಿ ಕನ್ನಡ ಚಿತ್ರಗಳಿಗೆ ಲುಕ್ಸಾನಾಯಿತು ಅಂತ ಕೊರಗುತ್ತಾರೆ, ಸಚಿನ್ ಸೆಂಚುರಿ ಹೊಡೆದಾಗ, ಇನ್ನು ಜನ ಟೀವಿ ಬಿಟ್ಟು ಅಲ್ಲಾಡೋಲ್ಲ, ನಮ್ಮ ಗತಿ ಗೋವಿಂದ ಎಂದು ಮರುಗುತ್ತಾರೆ. ಇಡೀ ಜಗತ್ತೇ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಅನ್ನುವ ಅನುಮಾನದಲ್ಲೇ ಪ್ರತಿದಿನವನ್ನೂ ಕಳೆಯುತ್ತಾರೆ. ನಾನು ಅವರನ್ನು ಗೇಲಿ ಮಾಡುತ್ತಿಲ್ಲ. ಪರಿಸ್ಥಿತಿಯ ಪಿತೂರಿಯಿಂದಾಗಿ ರೌಡಿಯಾಗುವ ಸಿನಿಮಾ ನಾಯಕನಿಗೂ ಇವರಿಗೂ ಹೆಚ್ಚು ವ್ಯತ್ಯಾಸವಿಲ್ಲ.  ಕಲೆ ಮತ್ತು ವ್ಯಾಪಾರದ ಜಗಳದಲ್ಲಿ ಬಡವಾಗುವ ಕೂಸುಗಳಿವರು. ಕೋಟಿಗಟ್ಟಲೆ ಕಾಸು ಹಾಕಿದರೂ ಅವರ ಮಾತು ನಿರ್ದೇಶಕನೆಂಬ ಸೃಜನಶೀಲನ ಮುಂದೆ ನಡೆಯುವುದಿಲ್ಲ. ಮಾತು ನಡೆಯಲೇಬೇಕು ಎಂಬ ಹಠದಿಂದ  ಸಿನಿಮಾ ಮಾಡಿದರೆ ನಿರ್ದೇಶಕನ ಜಾಗದಲ್ಲಿ ಗುಲಾಮ ಕೂತಿರುತ್ತಾನೆ.  

ರಾಜಕುಮಾರ್ ನಿರ್ಮಾಪಕನನ್ನು ಅನ್ನದಾತ ಅಂದರು. ಅವರ ನಂತರ... ಶೂಟಿಂಗ್ ಮುಗಿಯುವ ತನಕ ಅಷ್ಟೇ ಆತ ಯಜಮಾನ. ಆಮೇಲೆ ಆತನನ್ನು ಕೇಳುವವರಿಲ್ಲ. ಗೆದ್ದರೆ ಮತ್ತೊಂದು ಸಿನಿಮಾ ಮಾಡು ಅಂತ ಹುರಿದುಂಬಿಸುವ ಮಂದಿ, ಸೋತರೆ ದಾರಿ ಬದಲಾಯಿಸಿ ಓಡುವ ಅದೇ ಮಂದಿ. ಅಲ್ಲಾ ಸಂಬಂಧಗಳೂ ದುಡ್ಡಿನ ಲೆಕ್ಕಾಚಾರದ ಮೇಲೆಯೇ ನಿಂತಿರುವುದರಿಂದ  ನಿರ್ಮಾಪಕನ  ಕಣ್ಣಿಗೆ ಕಲಾವಿದರು ಕೆಲವೊಮ್ಮೆ ಸೆಟ್ ಪ್ರಾಪರ್ಟಿಗಳಂತೆ, ನಿರ್ದೇಶಕ ತನ್ನನ್ನು ಸುಲಿಯುವುದಕ್ಕೆಂದೇ ಜನ್ಮತಾಳಿದ ಶತ್ರುವಿನಂತೆ ಕಾಣಿಸುತ್ತಾರೆ.  

ದುಡ್ಡನ್ನೇ ಧ್ಯಾನಿಸುತ್ತಾ ಕುಳಿತಿರುವ ನಿರ್ಮಾಪಕನ ಮನಸ್ಸು ಯಾವ ಮಟ್ಟ ತಲುಪುತ್ತದೆ ಅನ್ನುವುದಕ್ಕೆ ಒಂದು ಉದಾಹರಣೆ ನೀಡುತ್ತಾ ಈ ಅಂಕಣವನ್ನು ಮುಗಿಸುತ್ತೇನೆ. ಸರ್ಕಾರ  ಇಪ್ಪತ್ತು ಚಿತ್ರಗಳಿಗಷ್ಟೇ ಯಾಕೆ ಸಬ್ಸಿಡಿ ಕೊಡಬೇಕು, ಎಲ್ಲಾ ಚಿತ್ರಗಳಿಗೂ ಕೊಡಲಿ ಎಂಬ ಚಳವಳಿ ತಾರಕಕ್ಕೇರಿದ ಸಂದರ್ಭದಲ್ಲಿ ನಾನೊಬ್ಬ ಕೋಟಿ ನಿರ್ಮಾಪಕರನ್ನು ಕೇಳಿದೆ. “ಅಲ್ಲಾ ಸ್ವಾಮೀ, ನಾಲ್ಕು ಕೋಟಿ ಖರ್ಚು ಮಾಡಿ ಸಿನಿಮಾ ತೆಗೀತೀರಾ, ಹತ್ತು ಲಕ್ಷಕ್ಕೆ ಯಾಕೆ  ದುಂಬಾಲು ಬೀಳುತ್ತೀರಿ?”. ಅದಕ್ಕೆ ಅವರು ನೀಡಿದ ಉತ್ತರ ಹೀಗಿತ್ತು. “ಚಿತ್ರ ಗೆದ್ದರೆ ಪರವಾಗಿಲ್ಲ, ಸೋತಾಗ ಆ ಹತ್ತು ಲಕ್ಷಾನೇ ನಮಗೆ ದೊಡ್ಡ ಅಮೌಂಟ್”, ಸೋಲಿಗೂ ಮುಂಗಡ ಬುಕ್ಕಿಂಗ್ ಮಾಡುತ್ತಾರಲ್ಲ ಅಂತ ಅಚ್ಚರಿಯಾಯಿತು.   ಅವರ ಮಟ್ಟಿಗೆ ಸಬ್ಸಿಡಿ ಅನ್ನುವುದು ಸಹಾಯ ಧನವಲ್ಲ, ಬದಲಾಗಿ ಪರಿಹಾರ ನಿಧಿ.  ಹತ್ತು ಲಕ್ಷ ಪರಿಹಾರಕ್ಕಾಗಿ ನಾಲ್ಕು ಕೋಟಿ ಕಳಕೊಳ್ಳುವುದಕ್ಕೆ ಹೊರಟ ಧೀರರು ಇವರು.   ಕೋಟಿಗಳನ್ನು ಖರ್ಚು ಮಾಡಿ ಸಿನಿಮಾ ಮಾಡುವ ಚಟವನ್ನೂ ಬಿಡಲಾರೆ, ಕೊನೆಗೆ ಹತ್ತು ಲಕ್ಷಕ್ಕೆ ಹೋರಾಡುವ ಹಠವನ್ನೂ ಬಿಡಲಾರೆ ಅನ್ನುವ ಪೈಕಿ.

ಅಲ್ಲೆಲ್ಲೋ ನಿರ್ಮಾಪಕ ಮಳೆ ನಿಲ್ಲಲಿ ಅಂತ ಭರವಸೆಯ ಮರದ ಕೆಳಗೆ ಕಾಯುತ್ತಿದ್ದಾನೆ. ಮುಂದಿನ ವಾರ ಆತನ ಸಿನಿಮಾ ರಿಲೀಸ್.  ಮಳೆ ನಿಲ್ಲಬಹುದು ಅಥವಾ ಮರ ಮುರಿದುಬೀಳಬಹುದು. ಆಯ್ಕೆ ಅವನದ್ದಲ್ಲ.

Also See

Pls Note -

The views expressed in this column are those of its author and Chitraloka or its publishers do not claim to endorse it. You can express your opinion to his e-mail -This email address is being protected from spambots. You need JavaScript enabled to view it.

Also See

Uma Column 2 - ಮುನಿ ಮತ್ತು MONEY

Uma Column 1 - ಜಗತ್ತಿನ ಕೂಸು ಮತ್ತು ಕನ್ನಡದ ಮನಸ್ಸು

ಸಿನಿಮಾ ಪತ್ರಿಕೋದ್ಯಮದಲ್ಲಿ ಉದಯ್ ನನ್ನ ಗುರು - ಜೋಗಿ

Udaya Marakini Column In Chitraloka