ಡಾಲಿ ಖ್ಯಾತಿಯ ಧನಂಜಯ್ ಚಿತ್ರರಂಗದಲ್ಲಿ 10 ವರ್ಷ ಪೂರೈಸಿದ್ದಾರೆ. ಅವರು ಹೀರೋ ಆಗಿ ನಟಿಸಿದ ಚಿತ್ರಗಳು ಸೋತಿದ್ದೇ ಹೆಚ್ಚು. ಒಂದು ಕಾಲದಲ್ಲಿ ದುರದೃಷ್ಟವಂತ ಎನಿಸಿಕೊಂಡಿದ್ದ ಧನಂಜಯ್ ಅವರಿಗೆ ಈಗ ಸುವರ್ಣ ಕಾಲ. ಟಗರು ಚಿತ್ರದ ಡಾಲಿ ಎಂಬ ಆ ಒಂದು ಪಾತ್ರ ಅವರಿಗೆ ಖ್ಯಾತಿ, ಹಣ ಎಲ್ಲವನ್ನೂ ಕೊಟ್ಟಿದೆ. ಇದೇ ವೇಳೆ ಅವರು ತಮ್ಮ 10 ವರ್ಷದ ವೃತ್ತಿ ಜೀವನದ ಏಳು ಬೀಳುಗಳನ್ನು ಹಂಚಿಕೊಂಡಿದ್ದಾರೆ.
ಟಗರು ಚಿತ್ರದಲ್ಲಿ ನೆಗೆಟಿವ್ ರೋಲ್ ಎಂದಾಗ, ಅದು ಸೂರಿಯ ಚಿತ್ರ ಹಾಗೂ ಶಿವಣ್ಣನ ಎದುರು ನಟಿಸುವ ಅವಕಾಶ ಎಂಬ ಕಾರಣಕ್ಕೆ ಒಪ್ಪಿಕೊಂಡೆ. ನಂತರ ಅದು ನನಗೆ ಬೇರೆಯೇ ಹೆಸರು ಕೊಟ್ಟಿತು. ಶಿವಣ್ಣ ಅಂತೂ ನನ್ನನ್ನು ಒಡಹುಟ್ಟಿದ ತಮ್ಮನಂತೆ ನೋಡಿಕೊಂಡರು. ವೇದಿಕೆಯಲ್ಲಿ ನನ್ನನ್ನು ತಮ್ಮ 3ನೇ ತಮ್ಮ ಎಂದರು. ಅದು ನನ್ನ ಅದೃಷ್ಟ ಬದಲಿಸಿತು ಎಂದಿರುವ ಧನಂಜಯ್ಗೆ ಆ ಚಿತ್ರ ರಿಲೀಸ್ ಆಗಿ, ಸಕ್ಸಸ್ ಆದ ಎಷ್ಟೋ ದಿನಗಳ ಮನೆಯಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ನೋಡುತ್ತಿದ್ದರಂತೆ. ಪುನೀತ್ ರಾಜ್ಕುಮಾರ್ ನಿರೂಪಣೆ ನೋಡುತ್ತಿದ್ದ ಅವರ ಅಜ್ಜಿ, ಪುನೀತ್ ಅವರನ್ನು ನೋಡಿ.. ಓ ಇವನು ಹಿಂಗೆ ವೇಷ ಹಾಕ್ಕೊಂಡ್ ಬುಟ್ಟವ್ನೆ ಅಂದರಂತೆ. ಅವರು ಯಾರು ಗೊತ್ತಾ..? ಎಂದು ಕೇಳಿದಾಗ.. ಅವರ ಅಜ್ಜಿ.. ಇವ್ನು ಗೊತ್ತಿಲ್ವಾ..? ನಮ್ ರಾಜ್ಕುಮಾರುನ್ ಮಗ ಅಂದರಂತೆ.
ಅಷ್ಟೇ ಅಲ್ಲ, ಟಗರು ರಿಲೀಸ್ ಆಗುವುದಕ್ಕೂ ಮುನ್ನ ತಾವು ರಾಜ್ ಸಮಾಧಿ ಬಳಿ ಹೋಗಿದ್ದೆ. ಆ ದಿನ ಪೊಲೀಸರು ಯಾರನ್ನೂ ಒಳಗೆ ಬಿಡ್ತಾ ಇರಲಿಲ್ಲ. ನಾನು ಊರಿಂದ ಬಂದಿದ್ದೇನೆ, ಇವತ್ತೇ ಹೋಗಬೇಕು ಎಂದು ಕೇಳಿದ್ದಕ್ಕೆ ಪೊಲೀಸರು ಒಳಗೆ ಬಿಟ್ಟರು. ನಾನು ರಾಜ್ಕುಮಾರುನ್ ತಾವ ನನ್ ಮೊಮ್ಮಗನನ್ನ ನಿನ್ ಮಗಾ ಅಂತಾ ತಿಳ್ಕೊಂಡ್ ಆಶೀರ್ವಾದ ಮಾಡು, ಅವನಿಗೆ ಒಳ್ಳೇದಾಗ್ಲಿ ಅಂತಾ ಕೇಳ್ಕೊಂಡಿದ್ದೆ ಎಂದರಂತೆ.
ಅಜ್ಜಿಯ ಆ ಮಾತು, ಇತ್ತ ಶಿವಣ್ಣ, ಧನಂಜಯ್ ನನ್ನ ತಮ್ಮನಿದ್ದ ಹಾಗೆ ಎನ್ನುವ ಮಾತು ಎಲ್ಲವೂ ಒಂದರ ಹಿಂದೊಂದು ನೆನಪಾಗಿ ಕಣ್ಣೀರಿಟ್ಟಿದ್ದೆ ಎಂದಿದ್ದಾರೆ ಧನಂಜಯ್. ಸದ್ಯಕ್ಕೆ ಧನಂಜಯ್ ಕೈತುಂಬಾ ಚಿತ್ರಗಳಿವೆ. ಯುವರತ್ನ, ಪಾಪ್ ಕಾರ್ನ್ ಮಂಕಿ ಟೈಗರ್, ಸಲಗ, ಬಡವ ಱಸ್ಕಲ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಧನಂಜಯ್.